ಮಡಿಕೇರಿ, ಆ. ೨೧: ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದೊಂದಿಗೆ ಸಮಾಜದಲ್ಲಿ ಸಾಧನೆ ಕೂಡ ಮಾಡಬೇಕೆಂದು ಕೊಡಗು ಜಿಲ್ಲಾ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಕರೆ ನೀಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮಡಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ೨೦೨೫-೨೬ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಲು ಕಾರಣಕರ್ತರಾದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಆವರು ಮಾತನಾಡಿದರು.

ಮಕ್ಕಳು ಈ ದೇಶದ ಪೀಳಿಗೆಯಾಗಿದ್ದು, ಉತ್ತಮ ಅಂಕ ಗಳಿಸುವವರನ್ನು ಪ್ರೋತ್ಸಾಹಿಸುವದು ನಮ್ಮ ಜವಾಬ್ದಾರಿ ಹಾಗೂ ಕರ್ತವ್ಯ ಕೂಡ ಆಗಿದೆ. ಎಲ್ಲರಿಗೂ ವಿದ್ಯೆ ಮುಖ್ಯ, ವಿದ್ಯಾರ್ಥಿಗಳು ಕಲಿತು ಸಮಾಜಕ್ಕೆ ಸೇವೆ ಸಲ್ಲಿಸಬೇಕು, ಉತ್ತಮ ನಾಗರಿಕರಾಗಬೇಕೆಂದು ಹೇಳಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹೇಳಿದಂತೆ ಶಿಸ್ತು, ಸತ್ಯತೆಯ ಗುಣ ಬೆಳೆಸಿಕೊಳ್ಳಬೇಕು. ಯುವಪೀಳಿಗೆ, ಅಂದರೆ ಜೆನ್ ಝಿ ಒಟ್ಟಾದರೆ ಸಮಾಜವನ್ನೇ ಅಲುಗಾಡಿಸುವ ಶಕ್ತಿ ಇದೆ, ಆದರೆ ಅದನ್ನು ಒಳ್ಳೆಯ ವಿಚಾರಕ್ಕೆ ಬಳಸಿಕೊಳ್ಳಬೇಕು. ಆರೋಗ್ಯವನ್ನು ಕಾಪಾಡಿಕೊಳ್ಳುವದರೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು ಎಂದು ಹೇಳಿದ ಅವರು; ಕಳೆದ ಸಾಲಿನಲ್ಲಿ ರಜೆಗಳು ಅಧಿಕವಾಗಿ ತರಗತಿಗಳು ಸರಿಯಾಗಿ ನಡೆಯದಿದ್ದರೂ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜ ಗುರುತಿಸುವಂತೆ ಜೀವನ

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಶಕ್ತಿ ದಿನಪತ್ರಿಕೆ ಉಪ ಸಂಪಾದಕ ಕುಡೆಕಲ್ ಸಂತೋಷ್ ದೇಶ ಪ್ರಗತಿ ಹೊಂದಲು ವಿದ್ಯಾರ್ಥಿಗಳ ಪಾತ್ರ ವಿಷಯದ ಕುರಿತು ಮಾತನಾಡಿ; ಹುಟ್ಟು-ಸಾವು ಈ ಎರಡಕ್ಷರಗಳ ನಡುವಿನ ಜೀವನದಲ್ಲಿ ಏನಾದರೂ ಸಾಧನೆ ಮಾಡುವದರೊಂದಿಗೆ ದೇಶಕ್ಕೆ ಕೊಡುಗೆ ನೀಡುವದರೊಂದಿಗೆ ಸಮಾಜ ಗುರುತಿಸುವಂತೆ ಜೀವನ ನಡೆಸಬೇಕೆಂದು ಹೇಳಿದರು. ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗಾಗಿ ಓದುವದಲ್ಲ ಜೊತೆಯಲ್ಲಿ ಜ್ಞಾನದ ಸಂಪಾದನೆ ಕೂಡ ಮಾಡಬೇಕು. ಪತ್ರಿಕೆ, ಪುಸ್ತಕಗಳನ್ನು ಓದುವದರಿಂದ ಜ್ಞಾನದ ಅರಿವು ಮೂಡುತ್ತದೆ. ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಬೇಕು. ಇದು ಭವಿಷ್ಯದಲ್ಲಿ ಉಪಯೋಗಕ್ಕೆ ಬರುತ್ತದೆ. ಪ್ರಸ್ತುತ ತಾಂತ್ರಿಕತೆ ಮುಂದುವರಿದಿದ್ದು ಎಲ್ಲರೂ ಮೊಬೈಲ್ ದಾಸರಾಗಿದ್ದಾರೆ. ಮೊಬೈಲ್‌ಗಳನ್ನು ಮಿತಿಯಾಗಿ ಬಳಸುವದರೊಂದಿಗೆ ಒಳಿತಿನ ವಿಚಾರಕ್ಕಾಗಿ ಮೀಸಲಿಡಬೇಕು ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ಸಮಯ ಪಾಲನೆಯೊಂದಿಗೆ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು, ಪರಿಸರ ಕಾಳಜಿಯೊಂದಿಗೆ ಸ್ವಚ್ಛತೆ ಕಾಪಾಡಬೇಕು, ಕಾನೂನನ್ನು ಉಲ್ಲಂಘಿಸದೆ ಗೌರವ ನೀಡಬೇಕು. ಪ್ರಾಮಾಣಿಕರಾಗಿ ವಿದ್ಯಾವಂತರಾಗಿ ಉದ್ಯೋಗ ಸಿಗದಿದ್ದಲ್ಲಿ ಸ್ವಾಲಂಬಿಯಾಗಿ ಇತರರಿಗೂ ಉದ್ಯೋಗ ಕಲ್ಪಿಸುವದರೊಂದಿಗೆ ದೇಶಕ್ಕೆ ಕೊಡುಗೆ ನೀಡಬೇಕು. ಮುಖ್ಯವಾಗಿ ಶಿಸ್ತು ಹಾಗೂ ದೇಶಭಕ್ತಿ ಮೂಡಿಸಿಕೊಂಡು ಭವ್ಯ ಭಾರತದ ಶಿಲ್ಪಿಗಳಾಬೇಕೆಂದು ಕರೆ ನೀಡಿದರು.

ಅವಕಾಶ ಕಳೆದುಕೊಳ್ಳಬೇಡಿ

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವಕಾಮತ್ ಮಾತನಾಡಿ; ರಾಷ್ಟçದಲ್ಲಿ ಕೋಟ್ಯಂತರ ಜನರಿದ್ದರೂ ಕೆಲವರಿಗೆ ಗೌರವ ಸಿಗುತ್ತದೆ, ಆವರುಗಳ ಜೀವನÀವನ್ನು ಸಮಾಜಕ್ಕೆ ಮುಡಿಪಾಗಿರಿಸಿ, ಸಮಾಜಕ್ಕೆ ಉಪಯೋಗವಾಗುವಂತಹ ಕೆಲಸಗಳನ್ನು ಮಾಡಿರುವದರಿಂದ ಗೌರವಕ್ಕೆ ಪಾತ್ರರಾಗಿದ್ದಾರೆ. ನಿಮಗೂ ಕೂಡ ಸೇವೆ ಸಲ್ಲಿಸಲು ಅವಕಾಶ ಇದ್ದು, ಸಿಕ್ಕಿದ ಅವಕಾಶವನ್ನು ಕಳೆದುಕೊಳ್ಳಬೇಡಿ, ನಿಮ್ಮಲ್ಲಿರುವ ಆಸಕ್ತಿ ಬಗ್ಗೆ ತಿಳಿದುಕೊಂಡು ಜೀವನದಲ್ಲಿ ಏಳಿಗೆ ಸಾಧಿಸಬೇಕೆಂದು ಕರೆ ನೀಡಿದರು. ಕಲಿಕೆ ಮುಗಿಯುವದಿಲ್ಲ, ಪಠ್ಯ ಮಾತ್ರವಲ್ಲದೆ ಇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು, ಪತ್ರಿಕೆಗಳನ್ನು ಓದುವದರಿಂದ ಜ್ಞಾನ ಸಿಗುತ್ತದೆ. ಉನ್ನತ ಪರೀಕ್ಷೆ ಎದುರಿಸಲು ಜ್ಞಾನ ಅವಶ್ಯ, ನಿಮಗೆ ನೀವೇ ದಾರಿದೀಪವಾಗಬೇಕು. ಗುರು ಹಿರಿಯರನ್ನು ಗೌರವಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು

ಮಾನವೀಯತೆ ಇರಲಿ

ಕೊಡಗು ಚಾನಲ್ ಸಂಪಾದಕ ಜಿ.ವಿ.ರವಿಕುಮಾರ್ ಮಾತನಾಡಿ; ವಿದ್ಯಾರ್ಥಿಗಳಲ್ಲಿ ಜ್ಞಾನ, ಆತ್ಮ ವಿಶ್ವಾಸ, ಶಿಸ್ತು ಮೊದಲು ಬರಬೇಕು, ಜ್ಞಾನ ಸಂಪಾದನೆ ಮಾಡಬೇಕು. ವಿದ್ಯಾರ್ಥಿಗಳೇ ದೇಶದ ಮುಂದಿನ ಭವಿಷ್ಯ, ಶಕ್ತಿ. ಹಾಗಾಗಿ ತಮ್ಮಲ್ಲಿರುವ ಪ್ರತಿಭೆ, ಜ್ಞಾನವನ್ನು ಇತರರಿಗೆ ಧಾರೆ ಎರೆಯಬೇಕು, ಆಗ ದೇಶ ಪ್ರಗತಿ ಕಾಣಲಿದೆ ಎಂದು ಹೇಳಿದರು. ನಿಸ್ವಾರ್ಥ ಸೇವೆ ಮಾಡುವ ಮನಸುಗಳು ಮುಂದೆ ಬರಬೇಕು. ತಂತ್ರಜ್ಞಾನ ಮುಂದುವರಿದಿದ್ದು, ಬಳಸಿಕೊಳ್ಳಬೇಕು; ದುರುಪಯೋಗ ಮಾಡಿಕೊಳ್ಳಬೇಡಿ, ಯುವಶಕ್ತಿ ಏನೂ ಮಾಡಬಹುದು, ಆದರೆ ಯಾರೂ ಕೂಡ ಸ್ವಾರ್ಥಿಗಳಾಗಬಾರದು. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿ, ಮೇಲೆತ್ತಲು ಪ್ರಯತ್ನಿಸಬೇಕು. ಮಾನವೀಯತೆ ಗುಣ ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಸಮಯ ವ್ಯರ್ಥ ಮಾಡದೆ ಸಮರ್ಪಕವಾಗಿ ಬಳಸಿಕೊಂಡು ಮುಖ್ಯವಾಹಿನಿಗೆ ಬಂದರೆ ಅದೇ ದೇಶದ ಪ್ರಗತಿ ಎಂದು ಹೇಳಿದರು.

ಗುರುಗಳನ್ನು ಗೌರವಿಸಿ

ಉದ್ಯಮಿ ಕೆ.ಕೆ. ದಾಮೋದರ್ ಮಾತನಾಡಿ; ವಿದ್ಯಾರ್ಥಿಗಳಲ್ಲಿ ಎಂದಿಗೂ ನಗು ತುಂಬಿರಬೇಕು, ಪ್ರತಿಭೆಗಳು ಹಳ್ಳಿಗಾಡಿನಲ್ಲೂ ಇರುತ್ತವೆ, ಪ್ರತಿಭೆಗಳಿಗೆ ಹಣ ಮುಖ್ಯವಲ್ಲ ಪ್ರಶಂಸೆಯೇ ಬಹುಮಾನ, ಸನ್ಮಾನಿತರು ಇತರರಿಗೆ ಪ್ರೇರಣೆಯಾಗಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ಗುರುಗಳ ಮಾತುಗಳನ್ನು ಮೈಗೂಡಿಸಿಕೊಳ್ಳಬೇಕು. ಅವರುಗಳು ಒತ್ತಡದ ನಡುವೆಯೂ ವಿದ್ಯಾರ್ಜನೆ ಮಾಡುತ್ತಾರೆ. ವಿದ್ಯಾರ್ಥಿಗಳು ಉತ್ತಮ ಪ್ರಜೆ, ನಾಯಕರಾಗಬೇಕು ಎಂಬದು ಅವರ ಉದ್ದೇಶವಾಗಿರುತ್ತದೆ. ಅಂತಹ ಗುರುಗಳನ್ನು ಗೌರವಿಸಬೇಕೆಂದು ಹೇಳಿದರು.

೧೨ ವರ್ಷದಿಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಸಂಸ ಸಂಚಾಲಕ ಹೆಚ್.ಎಲ್.ದಿವಾಕರ್ ಮಾತನಾಡಿ; ಕಳೆದ ೧೨ ವರ್ಷಗಳಿಂದ ಸಾಧನೆ ಮಾಡಿದ ಸರಕಾರಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯ ಮಾಡಿಕೊಂಡು ಬರಲಾಗುತ್ತಿದೆ. ಸರಕಾರಿ ಶಾಲೆಯಲ್ಲಿ ಸಿಕ್ಕುವ ಶಿಕ್ಷಣ ಖಾಸಗಿ ಶಾಲೆಯಲ್ಲಿ ಸಿಗುವದಿಲ್ಲ. ಸರಕಾರಿ ಶಾಲಾ ಶಿಕ್ಷಕರು ಸಮಯದ ಒತ್ತಡದ ನಡುವೆಯೂ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಭವಿಷ್ಯದ ಪ್ರಜೆಗಳನ್ನು ರೂಪಿಸುವವರು ಎಂದು ಹೇಳಿದರು.

ಶಿಕ್ಷಕರು-ವಿದ್ಯಾರ್ಥಿಗಳಿಗೆ ಸನ್ಮಾನ

ಇದೇ ಸಂದರ್ಭ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ೨೩ ವಿದ್ಯಾರ್ಥಿಗಳು, ಪ್ರಾಂಶುಪಾಲರು ಹಾಗೂ ಉಪನ್ಯಾಸಕರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಡಗದಾಳುವಿನ ಬೆಳೆಗಾರ ಎಂ.ಎಸ್.ಯೂಸಫ್, ಪ.ಪೂ. ಶಿಕ್ಷಣ ಇಲಾಖಾಧಿಕಾರಿ ಕ್ರಿಸ್ಟೋಫರ್ ಇದ್ದರು. ಕಾಲೇಜಿನ ಪ್ರಾಂಶುಪಾಲ ಪಿ.ಆರ್. ವಿಜಯ ಸ್ವಾಗತಿಸಿದರೆ, ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕ ಶಿವಪ್ಪ ಕಾರ್ಯಕ್ರಮ ನಿರೂಪಿಸಿದರು.