ನಾಪೋಕ್ಲು, ಆ. ೨೧: ಇಲ್ಲಿಗೆ ಸಮೀಪದ ಚೆರಿಯಪರಂಬು - ಕಲ್ಲುಮೊಟ್ಟೆಗೆ ತೆರಳುವ ರಸ್ತೆಯ ದುಸ್ಥಿತಿಯಿಂದ ಜನಸಾಮಾನ್ಯರು ಹೈರಾಣಗಿದ್ದಾರೆ. ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ಜನಸಾಮಾನ್ಯರು ನಡೆದಾಡಲು ಹಾಗೂ ವಾಹನ ಚಾಲಕರಿಗೂ ಸಮಸ್ಯೆ ಉಂಟಾಗಿದೆ.

ಚೆರಿಯಪರಂಬು ಭಾಗದಲ್ಲಿ ಸಾಕಷ್ಟು ಮನೆಗಳಿದ್ದು, ಇಲ್ಲಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳುತ್ತಿದ್ದಾರೆ. ಗ್ರಾಮಸ್ಥರು ತಮ್ಮ ಕೆಲಸ ಕಾರ್ಯಗಳಿಗಾಗಿ ಪೇಟೆಯನ್ನು ಅವಲಂಭಿಸಿರುವುದು ಅನಿವಾರ್ಯ. ಆದರೆ ಈ ರಸ್ತೆಯಲ್ಲಿ ನಡೆದಾಡುವುದು ತೀರಾ ಸಮಸ್ಯೆಯಾಗಿದೆ. ರಸ್ತೆ ಪೂರ್ತಿ ಗುಂಡಿಮಯವಾಗಿದ್ದು ಗುಂಡಿಗಳಲ್ಲಿ ಕೆಸರು ಮಣ್ಣು ತುಂಬಿಕೊAಡು ಸಮಸ್ಯೆಗಳ ಸರಮಾಲೆಯನ್ನು ಸೃಷ್ಟಿಸಿದೆ.

ಈ ರಸ್ತೆಯಲ್ಲಿ ಖಾಸಗಿ ವಾಹನಗಳು, ಆಟೋಗಳು ಸೇರಿದಂತೆ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಶಾಲಾ ವಾಹನಗಳು ಕೂಡ ಸಂಚರಿಸುತ್ತವೆ. ಇತ್ತೀಚೆಗೆ ಖಾಸಗಿ ಶಾಲೆಯ ಬಸ್ ಕೆಸರಿನಲ್ಲಿ ಸಿಲುಕಿ ಸಮಸ್ಯೆ ಉಂಟಾಗಿತ್ತು. ರಸ್ತೆಯಲ್ಲಿ ಮಣ್ಣು ತಂದು ಸುರಿದಿದ್ದ ಪರಿಣಾಮ ಮಳೆ ನೀರು ಸೇರಿಕೊಂಡು ಸಂಪೂರ್ಣ ರಸ್ತೆ ಕೆಸರುಮಯವಾಗಿದೆ. ಗ್ರಾಮ ಪಂಚಾಯಿತಿ ತುರ್ತಾಗಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.