ಒಂದೇ ತಿಂಗಳಲ್ಲಿ ಲಕ್ಷಕ್ಕೂ ಹೆಚ್ಚು ದಂಡ
ಸಿದ್ದಾಪುರ, ಆ. ೨೧: ಅಪ್ರಾಪ್ತ ವಯಸ್ಸಿನವರಿಗೆ ವಾಹನವನ್ನು ಚಾಲನೆಗೆ ನೀಡುವುದು ಅಕ್ಷಮ್ಯ ಅಪರಾಧವಾಗಿದೆ. ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೆಗೆ ಅವಕಾಶ ನೀಡದಂತೆ ಪೊಲೀಸ್ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಅರಿವು ಮೂಡಿಸಿದರೂ ಪೋಷಕರು ಎಚ್ಚೆತ್ತುಕೊಂಡಿಲ್ಲ. ಇದೀಗ ವಾಹನ ನೀಡುವ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗುತ್ತಿದ್ದು, ಆ ಮೂಲಕ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ನೀಡುವ ಪೋಷಕರಿಗೆ ಪೊಲೀಸರು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ನಿಟ್ಟಿನಲ್ಲಿ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದ್ದು, ತಪಾಸಣೆ ವೇಳೆ ಹಲವು ವಾಹನಗಳನ್ನು ಜಪ್ತಿ ಮಾಡಿ ಪೋಷಕರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದ ಮೂಲಕ ಪ್ರತ್ಯೇಕ ಪ್ರಕರಣಗಳಲ್ಲಿ ಪೋಷಕರು ಒಂದು ಲಕ್ಷಕ್ಕೂ ಹೆಚ್ಚು ದಂಡ ಪಾವತಿಸಿದ್ದಾರೆ.
ಅಪ್ರಾಪ್ತರು ವಾಹನ ಚಾಲನೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ, ಅಪ್ರಾಪ್ತರಿಗೆ ವಾಹನ ನೀಡುವ ಪೋಷಕರು ಹಾಗೂ ವಾಹನ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ತಮ್ಮ ಮಕ್ಕಳಿಗೆ ವಾಹನ ನೀಡಿ ಪರೋಕ್ಷವಾಗಿ ಪ್ರಾಣಹಾನಿಗೂ ಪೋಷಕರು ಕಾರಣರಾಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸಿದ್ದಾಪುರ ಸಮೀಪ ಸಂಭವಿಸಿದ ಅಪಘಾತದಲ್ಲಿ ವಾಹನ ಚಾಲನೆಯಲ್ಲಿ ಅಪ್ರಾಪ್ತ ಬಾಲಕ ಮೃತಪಟ್ಟಿರುವುದು ಇದಕ್ಕೆ ಸ್ಪಷ್ಟ ಉದಾಹರಣೆ ಎಂದು ಸಿದ್ದಾಪುರ ಠಾಣಾಧಿಕಾರಿ ಈ. ಮಂಜುನಾಥ್ ‘ಶಕ್ತಿ’ಗೆ ತಿಳಿಸಿದರು.
ವಿಶೇಷ ಕಾರ್ಯಾಚರಣೆ : ಅಪ್ರಾಪ್ತರು ವಾಹನ ಚಾಲನೆ ಮಾಡುವುದಕ್ಕೆ ಕಡಿವಾಣ ಹಾಕುವ ಸಲುವಾಗಿ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕಾರ್ಯಾಚರಣೆ ವೇಳೆ ಅಪ್ರಾಪ್ತರು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ವಾಹನ ಜಪ್ತಿ ಮಾಡಲಾಗುತ್ತದೆ. ಅವರಿಗೆ ವಾಹನ ಕೊಟ್ಟ ಪೋಷಕರು ಇಲ್ಲವೇ ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕ್ರಮ ಜರುಗಿಸಲಾಗುತ್ತದೆ ಎಂದು ಈ. ಮಂಜುನಾಥ್ ತಿಳಿಸಿದರು. ಮಕ್ಕಳ ಪ್ರಾಣಹಾನಿ ಸಂಭವಿಸದAತೆ ಕಾನೂನು ಕ್ರಮಕ್ಕೆ ಮುಂದಾಗಿರುವ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿದ್ದಾರೆ. - ಎ.ಎಸ್. ಮುಸ್ತಫಾ, ಸಿದ್ದಾಪುರ