ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಆ. ೨೦: ಕರ್ನಾಟಕದ ಸಾವಿರಕ್ಕೂ ಹೆಚ್ಚು ಗ್ರಾಮಗಳ ಜನರಲ್ಲಿ ಆತಂಕ ಸೃಷ್ಟಿಸಿರುವ ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ವಿಧಾನಸಭೆಯಲ್ಲಿ ತಿಳಿಸಿದರು.

ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರು ನಿಯಮ ೬೯ರ ಅಡಿ ವಿಷಯ ಪ್ರಸ್ತಾಪಿಸಿ, ಪಶ್ಚಿಮಘಟ್ಟ ಭಾಗದ ಜನರ ಆತಂಕ ನಿವಾರಿಸಿ ರೈತರ ಹಾಗೂ ಸ್ಥಳೀಯರ ಹಿತಾಸಕ್ತಿಯನ್ನು ಕಾಪಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ರಾಮಲಿಂಗಾರೆಡ್ಡಿ, ಕಸ್ತೂರಿ ರಂಗನ್ ವರದಿಯಿಂದ ರಾಜ್ಯದ ೧೦ ಜಿಲ್ಲೆಗಳ ೩೯ ತಾಲೂಕುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಹಿಂದೆ ಕೂಡ ರಾಜ್ಯ ಸರ್ಕಾರ ವರದಿಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಪ್ರಸ್ತುತ ಆಕ್ಷೇಪಣೆ ಸಲ್ಲಿಸಲು ೬೦ ದಿನಗಳ ಕಾಲಾವಕಾಶವಿದ್ದು, ವರದಿಯನ್ನು ತಿರಸ್ಕರಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಶಿಫಾರಸು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಪಕ್ಷಾತೀತವಾಗಿ ಹೋರಾಟಕ್ಕೆ ಪೊನ್ನಣ್ಣ ಕರೆ

ಸದನದಲ್ಲಿ ಚರ್ಚೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ, ಜುಲೈ ೨೬ರಂದು ಕೇಂದ್ರ ಅರಣ್ಯ ಸಚಿವಾಲಯ ಹೊರಡಿಸಿರುವ ಕರಡು ಅಧಿಸೂಚನೆಯಿಂದ ಮಲೆನಾಡು ಹಾಗೂ ಪಶ್ಚಿಮಘಟ್ಟ ಭಾಗದ ಜನರಲ್ಲಿ ಆತಂಕ ಉಂಟಾಗಿದೆ ಎಂದು ಹೇಳಿದರು.

ಈ ಕುರಿತು ತಾವು ಸೇರಿದಂತೆ ಶಾಸಕ ತಮ್ಮಯ್ಯ, ಶಿವಮೊಗ್ಗ ನಗರ ಶಾಸಕ, ರಾಜೇಗೌಡ ಹಾಗೂ ಶಿರಸಿ ಶಾಸಕರು ಸಹಿ ಮಾಡಿದ್ದ ಅರ್ಜಿಯನ್ನು ಸದನದಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗಿದೆ. ಇದು ಪಕ್ಷಾತೀತವಾಗಿ ನಡೆಯಬೇಕಾದ ಹೋರಾಟವಾಗಿದ್ದು, ರೈತರ ಹಿತಾಸಕ್ತಿಗಾಗಿ ಎಲ್ಲರೂ ಒಗ್ಗೂಡಿ ನಿರ್ಣಯ ಕೈಗೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಈ ಹಿಂದೆ ಅರಣ್ಯ ಸಚಿವರಾಗಿದ್ದ ಈಶ್ವರ್ ಖಂಡ್ರೆ ಅವರ ಅವಧಿಯಲ್ಲಿಯೂ ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿತ್ತು. ಇದೀಗ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಕೂಡ ವರದಿಯನ್ನು ತಿರಸ್ಕರಿಸುವ ನಿಲುವು ವ್ಯಕ್ತಪಡಿಸಿರುವುದು ಶಾಸಕನಾಗಿ ತಮಗೆ ಸಮಾಧಾನ ತಂದಿದೆ ಎಂದು ಪೊನ್ನಣ್ಣ ಹೇಳಿದರು. ರಾಜಕೀಯ ಬದಿಗಿಟ್ಟು ರೈತರ ಸಮಸ್ಯೆಗಾಗಿ ಎಲ್ಲರೂ ಒಂದಾಗಬೇಕು. ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ಶಾಸಕರು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಪೊನ್ನಣ್ಣ ಮನವಿ ಮಾಡಿದರು.