ಸಿದ್ದಾಪುರ, ಆ. ೨೦: ಕಾರ್ಮಿಕನ ಮೇಲೆ ದಾಳಿ ನಡೆಸಿ ಕೊಂದು ಹಾಕಿದ್ದ ಪುಂಡಾನೆಯನ್ನು ಸೆರೆಹಿಡಿದು ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದ್ದು, ಇದೀಗ ಕ್ರಾಲ್‌ನಲ್ಲಿ ಬಂಧಿಸಲಾಗಿದೆ.

ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಕಣ್ಣಂಗಾಲದ ಯಡೂರು ಗ್ರಾಮದಲ್ಲಿ ಕಾರ್ಮಿಕನ ಮೇಲೆ ದಾಳಿ ನಡೆಸಿ ಮೃತಪಟ್ಟ ಘಟನೆಗೆ ಕಾರಣವಾಗಿದ್ದ ಪುಂಡಾನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೆರೆಹಿಡಿದು ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಿದ್ದರು.

ಇದರ ಬೆನ್ನಲ್ಲೇ ಬುಧವಾರ ಚೆಂಬೆಬೆಳ್ಳೂರು ಗ್ರಾಮದ ಕಾಫಿ ತೋಟದಲ್ಲಿ ಸೆರೆಹಿಡಿದ ಸಲಗವನ್ನೂ ದುಬಾರೆಗೆ ಕರೆತರಲಾಗಿದೆ. ಲಾರಿಗೆ ಹತ್ತಲು ಹಿಂದೇಟು ಹಾಕಿದ ಸಲಗವನ್ನು ಸಾಕಾನೆಗಳ ನೆರವಿನಿಂದ ಲಾರಿಗೆ ಹತ್ತಿಸಿ, ರಾತ್ರಿ ವೇಳೆ ದುಬಾರೆ ಶಿಬಿರಕ್ಕೆ ಕರೆತಂದು ಇಳಿಸಲಾಯಿತು. ಬಳಿಕ ಸಾಕಾನೆಗಳ ಸಹಾಯದಿಂದ ಆನೆಯನ್ನು ಪಳಗಿಸುವ ಕ್ರಾಲ್‌ಗೆ ಸೇರಿಸಲಾಯಿತು.

ಸಲಗದ ಆರೈಕೆ ಹಾಗೂ ಪಳಗಿಸುವ ಕಾರ್ಯಕ್ಕಾಗಿ ನುರಿತ ಮತ್ತು ಅನುಭವಿ ಕಾವಾಡಿಗರು ಹಾಗೂ ಮಾವುತರನ್ನು ಅರಣ್ಯ ಇಲಾಖೆ ನೇಮಿಸಿದೆ. ಆನೆ ಇರುವ ಕ್ರಾಲ್ ಸುತ್ತಮುತ್ತ ಸಾರ್ವಜನಿಕರ ಪ್ರವೇಶವನ್ನೂ ನಿರ್ಬಂಧಿಸಲಾಗಿದೆ. ಸಲಗವನ್ನು ಪಳಗಿಸಿದ ಬಳಿಕ ಅದಕ್ಕೆ ನಾಮಕರಣ ಮಾಡಿ ಕ್ರಾಲ್‌ನಿಂದ ಹೊರಗೆ ಬಿಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. - ವಾಸು