ಶ್ರೀಮಂಗಲ, ಆ. ೨೦: ಪೊನ್ನಂಪೇಟೆ ಕೊಡವ ಸಮಾಜ ಹಾಗೂ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಉಚಿತ ಕೊಡವ ಜಾನಪದ ಕಲೆಯಾದ ವಾಲಗತಾಟ್ ಕಲಿಕಾ ಶಿಬಿರದಲ್ಲಿ ೧೦೦ ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡರು.
ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ಶಿಬಿರವನ್ನು ಕೊಡವ ಸಮಾಜದ ಅಧ್ಯಕ್ಷ ಹಾಗೂ ಕೊಡವ ಜಾನಪದ ತಜ್ಞ ಕಾಳಿಮಾಡ ಎಂ. ಮೋಟಯ್ಯ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕೊಡವ ಜಾನಪದ ಕುಣಿತವಾದ ಪುತ್ತರಿ ಕೋಲಾಟ್, ಪರೆಯಕಳಿ, ಕಪ್ಪೆಯಾಟ್ ಇದೆಲ್ಲದರ ಮೂಲ ಬೇರು ವಾಲಗತಾಟ್ ಆಗಿದೆ. ನಮ್ಮ ಮಕ್ಕಳು ಇದನ್ನು ಕಲಿತು ಬೆಳೆಸಬೇಕು, ಹಿರಿಯರಿಂದ ಮಕ್ಕಳು ಕಲಿತು ಅನುಸರಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಜಾನಪದ ಕಲೆ ಹಸ್ತಾಂತರವಾಗುತ್ತದೆ. ಜಾನಪದ ಆಟ್ ಪಾಟ್ ನಿರಂತರವಾಗಿ ಹಿರಿಯರಿಂದ ಮುಂದಿನ ಪೀಳಿಗೆಗೆ ಹೋಗುತ್ತಾ ಇರಬೇಕು ಮತ್ತು ಮೂಲ ರೂಪಕ್ಕೆ ಚ್ಯುತಿಯಾಗದಂತೆ ಜಾಗೃತಿಗೊಳಿಸುವ ಉದ್ದೇಶದಿಂದ ಇಂತಹ ಕಲಿಕಾ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು.
ಶಿಬಿರದ ಮುಖ್ಯ ಅತಿಥಿ ತೂಕ್ ಬೊಳಕ್ ಕಲೆ ಮತ್ತು ಸಾಹಿತ್ಯ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಮಾತನಾಡಿ, ಇಂತಹ ಶಿಬಿರದಿಂದ ಮೂಲ ವಾಲಗತಾಟ್ ಕಲಿತು ಆ ಪರಂಪರೆ ಮುಂದುವರೆಸಲು ಸಹಕಾರಿಯಾಗುತ್ತದೆ. ಕೊಡವ ವಾಲಗತಾಟ್‌ನಲ್ಲಿ ೧೨ ವಿಧವಿದೆ. ಅದರಲ್ಲಿ ಆಟ್ ಕೊಟ್ಟ್, ಸುಗ್ಗಿ ಆಟ್, ಯರವ ಆಟ್, ಜೋಯಿ ಆಟ್, ಪುತ್ತರಿ ಕೋಲಾಟ್, ಬೊಳಕಾಟ್, ಉಮ್ಮತಾಟ್, ನರಿಯಾಟ್, ದೇವಾಟ್, ಪಾಂಬು ಆಟ್, ವಾಲಗ ಆಟ್ ಕೊಟ್ಟ್, ಮಾಪಿಳೆ ಆಟ್. ಇದರಲ್ಲಿ ಮಾಪಿಳೆ ಆಟ್ ಜೀವಂತ ಇಲ್ಲ. ಈ ಕುಣಿತ ಅಳವಿನಂಚಿನಲ್ಲಿದ್ದು ವಾಲಗ -ವಾದ್ಯ ಗೊತ್ತಿರುವ, ಅದಕ್ಕೆ ತಕ್ಕಂತೆ ಮೂಲ ಕುಣಿತ ಗೊತ್ತಿರುವ ಹಿರಿಯರನ್ನು ಕಂಡುಹಿಡಿದು ಈ ಜನಪದ ಕಲೆಯನ್ನು ಜೀವಂತ ಗೊಳಿಸಬೇಕಾಗಿದೆ. ವಾಲಗ ಪರಿಕರದಲ್ಲಿಯೂ ಅನುಕ್ರಮವಾಗಿ ಮುಂದಿನ ಸಾಲಿನಿಂದ ೧ ಪರೆ, ೨ ಡೋಲು, ತಾಳ (ಈಗ ಗೆಜ್ಜೆ ), ಕೊಂಬು, ಶ್ರುತಿ, ಮೋರಿ ಇರಬೇಕು ಎಂದರು.
ಶಿಬಿರದಲ್ಲಿ ಕೊಡವ ಜಾನಪದ ಪರಿಣತ ಕಲಾವಿದರಾದ ಮೈಸೂರಿನ ಕೂತಂಡ ಮೊಣ್ಣಪ್ಪ, ಕುಲ್ಲಚಿರ ವಿನುತಾ ಕೇಸರಿ, ಸ್ಥಳೀಯರಾದ ಸುಳ್ಳಿಮಾಡ ಶಿಲ್ಪಾ, ಮೂಕಳೆರ ರಮೇಶ್, ಮಾಚಿಮಾಡ ಮಂದಣ್ಣ, ಕೊಣಿಯಂಡ ಮಂಜು ಮಾದಯ್ಯ ತರಬೇತಿ ನೀಡಿದರು.
ಪೊನ್ನಂಪೇಟೆ ಸಂತ ಅಂತೋಣಿ, ಅಪ್ಪಚ್ಚಕವಿ, ಟಿ. ಶೆಟ್ಟಿಗೇರಿಯ ರೂಟ್ಸ್, ಶ್ರೀಮಂಗಲ ಜೆ.ಸಿ. ಶಾಲೆ, ಅರ್ವತೋಕ್ಲುವಿನ ಸರ್ವದೈವತಾ ಶಾಲೆಯ ೧೦೦ಕ್ಕೂ ಅಧಿಕ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭ ಕೊಡವ ಸಮಾಜದ ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ಜಂಟಿ ಕಾರ್ಯದರ್ಶಿ ಆಲೆಮಾಡ ಸುಧೀರ್, ಖಜಾಂಚಿ ಚೆಪ್ಪುಡೀರ ಕಾರ್ಯಪ್ಪ ನಿರ್ದೇಶಕರುಗಳಾದ ಕಳ್ಳಿಚಂಡ ಚಿಪ್ಪ ದೇವಯ್ಯ, ಕೊಣಿಯಂಡ ಸಂಜು ಸೋಮಯ್ಯ, ಅಜ್ಜಿಕುಟ್ಟಿರ ಪೃಥ್ವಿ ಸುಬ್ಬಯ್ಯ, ಮೂಕಳೆರ ಕಾವ್ಯ ಕಾವೇರಮ್ಮ, ಗುಮ್ಮಟ್ಟಿರ ಗಂಗಮ್ಮ ಹಾಗೂ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪ್ರೊ. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ, ಗೌ. ಕಾರ್ಯದರ್ಶಿ ಬಲ್ಲಡಿಚಂಡ ಕಸ್ತೂರಿ ಸೋಮಯ್ಯ, ಜಂಟಿ ಕಾರ್ಯದರ್ಶಿ ಮೂಕಳೆರ ಆಶಾ ಪೂಣಚ್ಚ, ಖಜಾಂಚಿ ಮೂಕಳೆರ ಪಟ್ಟು ಲೀಲಾವತಿ, ನಿರ್ದೇಶಕಿಯರಾದ, ಚಕ್ಕೆರ ವಾಣಿ ಸಂಜು, ಮಾಣಿಯಪಂಡ ಪಾರ್ವತಿ ಜೋಯಪ್ಪ, ಬಲ್ಯಮೀದೇರಿರ ಆಶಾ ಶಂಕರ್ ಹಾಜರಿದ್ದರು.