ಗೋಣಿಕೊಪ್ಪಲು, ಆ. ೨೦: ಗೋಣಿಕೊಪ್ಪ ಸಮೀಪದ ಕಳತ್ಮಾಡು ಹೊಸೂರು ಗ್ರಾಮದಲ್ಲಿ ನಿಗೂಢÀ ಕಾಯಿಲೆಗೆ ತುತ್ತಾಗಿ ರೈತರ ಸುಮಾರು ೭ ಎಮ್ಮೆ ಮತ್ತು ಕೋಣಗಳು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಗ್ರಾಮದ ಪ್ರಗತಿಪರ ರೈತರಾದ ಕೊಲ್ಲೀರ ಉಮೇಶ್ ಮತ್ತು ಗಯಾ ಕಾವೇರಪ್ಪ ಸಹೋದರರಿಗೆ ಸೇರಿದ ಎಮ್ಮೆ ಮತ್ತು ಕೋಣಗಳು ಸಾವನ್ನಪ್ಪಿವೆ.

ಈ ಸಹೋದರರು ಒಟ್ಟು ೨೭ ರಾಸುಗಳನ್ನು ಹೊಂದಿದ್ದು ೧೫ ದಿನದಲ್ಲಿ ಈ ಸರಣಿ ಸಾವು ಸಂಭವಿಸಿದೆ. ಪಶು ಸಂಗೋಪನಾ ಇಲಾಖೆಯಿಂದಲೂ ರಾಸುಗಳ ಮರಣೋತ್ತರ ಪರೀಕ್ಷೆ ನಡೆಸಿದರೂ ಸಾವಿನ ಬಗ್ಗೆ ಇನ್ನೂ ಕೂಡ ನಿಖರ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.

ಕಳತ್ಮಾಡು ಹಾಗೂ ಹೊಸೂರು ವ್ಯಾಪ್ತಿಯಲ್ಲಿ ಜಾನುವಾರುಗಳು ನಿಗೂಢವಾಗಿ ಸಾವನ್ನಪ್ಪಿದರೆ ಕೂಡಲೇ ಅಮ್ಮತ್ತಿಯ ಪಶುಸಂಗೋಪನಾ ಇಲಾಖೆಗೆ ಮಾಹಿತಿ ನೀಡಲು ಸಂಬAಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಲಿಂಗರಾಜ್ ದೊಡ್ಡಮನಿ, ಅಮ್ಮತ್ತಿ ಪಶು ವೈದ್ಯಕೀಯ ಇಲಾಖೆಯ ಡಾ. ನವೀನ್, ಪೊನ್ನಂಪೇಟೆಯ ಪಶು ವೈದ್ಯಾಧಿಕಾರಿ ಡಾ. ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೈಸೂರಿನ ಪ್ರಾದೇಶಿಕ ಡಯೋಗ್ನೋಸ್ಟಿಕ್ ಪ್ರಯೋಗಾಲಯದ ವಿಜ್ಞಾನಿ ಡಾ. ಸುಮಂತ್ ಸ್ಥಳಕ್ಕೆ ಆಗಮಿಸಿ ಎಮ್ಮೆಯ ಸೆಗಣಿ ಮತ್ತು ಇತ್ಯಾದಿಗಳನ್ನು ಸಂಗ್ರಹಿಸಿ ಹೆಚ್ಚಿನ ಸಂಶೋಧನೆಗಾಗಿ ಮೈಸೂರಿಗೆ ಕೊಂಡೊಯ್ದಿದ್ದಾರೆ. ಈ ಭಾಗದ ರೈತರ ಜಾನುವಾರುಗಳು ಅಸ್ವಾಭಾವಿಕವಾಗಿ ಸಾವನ್ನಪ್ಪಿದರೆ ಕೂಡಲೇ ಮಾಹಿತಿ ನೀಡುವಂತೆ ಹೊಸೂರು ಪಂಚಾಯಿತಿ ಮಾಜಿ ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ ತಿಳಿಸಿದ್ದಾರೆ.

ಪೊನ್ನಂಪೇಟೆ ಪಶು ವೈದ್ಯಾರಾದ ಡಾ. ಗಿರೀಶ್ ಮಾತನಾಡಿ ಇದು ಅಂಥ್ರಾಕ್ಸ್ ಕಾಯಿಲೆ ಅಲ್ಲ, ತೊಂಡೆಗಟ್ಟಿ ಕಾಲು ಬಾಯಿ ಜ್ವರ, ಚಪ್ಪೆ ರೋಗ, ಚರ್ಮರೋಗ ಇತ್ಯಾದಿ ಯಾವುದೂ ದೃಢಪಟ್ಟಿಲ್ಲ. ಮರಣ ಹೊಂದಿದ ಎಮ್ಮೆಯ ರಕ್ತದ ಮಾದರಿಯನ್ನು ಮೈಸೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಶೀಘ್ರವೇ ಸರಣಿ ಸಾವಿಗೆ ಕಾರಣ ಪತ್ತೆಹಚ್ಚಲಾಗುವುದು ಎಂದು ತಿಳಿಸಿದ್ದಾರೆ.