ವೀರಾಜಪೇಟೆ: ೮೦ನೇ ಸ್ವಾತಂತ್ರ÷್ಯ ದಿನಾಚರಣೆಯ ಅಂಗವಾಗಿ ವೀರಾಜಪೇಟೆ ಕೆನರಾ ಬ್ಯಾಂಕ್ ಶಾಖೆಯ ವತಿಯಿಂದ ದೇಶಸೇವೆ ಸಲ್ಲಿಸಿದ ಮಾಜಿ ಸೈನಿಕರಿಗೆ ಸನ್ಮಾನ ಹಾಗೂ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಆಶಿಶ್ ಅವರು, ಬ್ಯಾಂಕಿನ 'ಸಾಮಾಜಿಕ ಜವಾಬ್ದಾರಿ' ಯೋಜನೆಯಡಿ ಮತ್ತು ಮುಖ್ಯ ಕಚೇರಿಯ ನಿರ್ದೇಶನದಂತೆ ಪ್ರತಿವರ್ಷ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಇದರ ಭಾಗವಾಗಿ ಗ್ರಾಮೀಣ ಭಾಗದ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ತಲಾ ರೂ.೫,೦೦೦ ಹಾಗೂ ಪ್ರಾಥಮಿಕ ಶಾಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿನಿಯರ ಮುಂದಿನ ವ್ಯಾಸಂಗಕ್ಕಾಗಿ ತಲಾ ರೂ.೩,೦೦೦ ಪುರಸ್ಕಾರ ನೀಡಲಾಗುತ್ತಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವೀರಾಜಪೇಟೆ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್, ಮಾಜಿ ಯೋಧರ ಸೇವೆಯನ್ನು ಸ್ಮರಿಸಿ ಗೌರವಿಸುತ್ತಿರುವ ಕೆನರಾ ಬ್ಯಾಂಕ್‌ನ ಕಾರ್ಯ, ಸಾಮಾಜಿಕ ಕಾಳಜಿ ನಿಜಕ್ಕೂ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆನರಾ ಬ್ಯಾಂಕ್‌ನ ವಿಭಾಗೀಯ ವ್ಯವಸ್ಥಾಪಕರಾದ ಪಾರ್ಥಿಭನ್ ಎಸ್ ಅವರು ನಿವೃತ್ತ ಸೈನಿಕರಿಗಾಗಿ ನೂತನ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಸೈನಿಕರಿಗೆ ಶುಭ ಹಾರೈಸಿದರು.

ಸಹಾಯಕ ವ್ಯವಸ್ಥಾಪಕರಾದ ಟಿಂಟೋ ಜೆ. ವಿಲ್ಸನ್ ಅವರು ನಿವೃತ್ತ ಸೈನಿಕರಿಗಾಗಿಯೇ ಬ್ಯಾಂಕ್‌ನಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ 'ಭವಿಷ್ಯ ನಿಧಿ' ಸೇರಿದಂತೆ ವಿವಿಧ ವಿಶೇಷ ಸೇವೆಗಳು ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಚಪ್ಪಂಡ ಹರೀಶ್, ಕಾರ್ಯದರ್ಶಿ ಪುಗ್ಗೇರ ನಂದ, ಖಜಾಂಚಿ ತೋರೇರ ಪೂವಯ್ಯ, ನಿರ್ದೇಶಕರಾದ ಚೇಂದ್ರಿಮಾಡ ಗಣೇಶ್ ನಂಜಪ್ಪ, ಕೆ. ಭೀಮಯ್ಯ, ಸಲಾಂ ಎಂ.ಕೆ. ಕಡಂಗ, ಕಬ್ಬಚ್ಚಿರ ರತ್ನ, ಅಣ್ಣಳಮಾಡ ಸುಬ್ಬಯ್ಯ, ಬಾಳೆಕುಟ್ಟಿರ ದಿನಿ ಬೋಪಯ್ಯ, ಎಚ್.ಕೆ. ಅಪ್ಪಯ್ಯ, ವಾಸು ಪಿ.ಟಿ. ಪುಟ್ಟಿಚಂಡ ಮಧು ಮಾದಪ್ಪ, ಪಟ್ರಪಂಡ ಸೋಮೇಶ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು, ಪ್ರತಿಭಾವಂತ ವಿದ್ಯಾರ್ಥಿನಿಯರು, ಅವರ ಪೋಷಕರು ಹಾಗೂ ಕೆನರಾ ಬ್ಯಾಂಕ್‌ನ ಸಿಬ್ಬಂದಿ ವರ್ಗದವರು ಹಾಜರಿದ್ದರು.