ಚಿತ್ರ, ವರದಿ : ವಾಸು ಆಚಾರ್ಯ

ಸಿದ್ದಾಪುರ, ಆ. ೧೯: ಇತ್ತೀಚೆಗೆ ಯಡೂರು ಗ್ರಾಮದಲ್ಲಿ ಕಾರ್ಮಿಕನ ಮೇಲೆ ದಾಳಿ ನಡೆಸಿ ಬಲಿ ಪಡೆದಿದ್ದ ಸುಮಾರು ೩೨ ವರ್ಷ ಪ್ರಾಯದ ಒಂಟಿ ಸಲಗವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಣ್ಣಂಗಾಲ ಗ್ರಾಮದ ಯಡೂರು ಹಾಗೂ ಹಚ್ಚಿನಾಡು ವ್ಯಾಪ್ತಿಯಲ್ಲಿ ದಾಂಧಲೆ ನಡೆಸುತ್ತಿದ್ದ ಈ ಕಾಡಾನೆಯನ್ನು ಸೆರೆಹಿಡಿಯುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿದ್ದರು. ಈ ಸಂದರ್ಭ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಅಲ್ಲದೆ, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ವಿಧಾನಸಭೆಯಲ್ಲಿ ಜಿಲ್ಲೆಯ ಮಾನವ-ಆನೆ ಸಂಘರ್ಷದ ಕುರಿತು ಸರ್ಕಾರದ ಗಮನ ಸೆಳೆದು, ಮೂರು ಕಾಡಾನೆಗಳನ್ನು ಸೆರೆಹಿಡಿಯಲು ಅನುಮತಿ ದೊರಕಲು ಸಹಕರಿಸಿದ್ದರು.

ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಕಣ್ಣಂಗಾಲ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಅರಣ್ಯ ಇಲಾಖೆ ತಂಡವು ಬುಧವಾರ ಬೆಳಿಗ್ಗೆಯಿಂದ ಕಾಡಾನೆಯ ಪತ್ತೆಗೆ ಕಾರ್ಯಾಚರಣೆ ನಡೆಸಿತು. ವೀರಾಜಪೇಟೆ ತಾಲೂಕಿನ ಕಾವಾಡಿ ಗ್ರಾಮದ ಬಳಿ ಸಲಗ ಪತ್ತೆಯಾದ ಹಿನ್ನೆಲೆಯಲ್ಲಿ ವನ್ಯಜೀವಿ ವೈದ್ಯಾಧಿಕಾರಿಗಳು ಅರವಳಿಕೆ ಪ್ರಯೋಗಿಸಲು ಸಿದ್ಧತೆ ನಡೆಸಿದರು. ಶಾರ್ಪ್ ಶೂಟರ್ ಹಾಗೂ ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಅವರು ಅರವಳಿಕೆಯನ್ನು ನಿಖರವಾಗಿ ಸಲಗಕ್ಕೆ ಪ್ರಯೋಗಿಸಿದರು. ಪರಿಣಾಮದಿಂದ ಸುಮಾರು ಒಂದು ಕಿ.ಮೀ. ದೂರ ಸಾಗಿದ ಸಲಗವು ಚೆಂಬೆಬೆಳ್ಳೂರು ಗ್ರಾಮದ ಚೇಂದAಡ ನಿಶ್ಚಿತ್ ಬಿದ್ದಪ್ಪ ಅವರ ಕೆರೆಯ ಬಳಿ ನೆಲಕ್ಕುರುಳಿತು. ತಕ್ಷಣ ಕಾರ್ಯಾಚರಣೆ ತಂಡದ ಸಿಬ್ಬಂದಿ ಆನೆಯ ತಲೆಗೆ ನೀರು ಸುರಿದು, ಕಾಲುಗಳಿಗೆ ಬಲವಾದ ಹಗ್ಗಗಳನ್ನು ಕಟ್ಟಿ ನಿಯಂತ್ರಣಕ್ಕೆ ತೆಗೆದುಕೊಂಡರು.

ಬಳಿಕ ದುಬಾರೆ ಆನೆ ಶಿಬಿರದಿಂದ ಆಗಮಿಸಿದ್ದ ಸಾಕಾನೆಗಳ ನೆರವಿನಿಂದ ಸಲಗವನ್ನು ಕೆರೆಯ ಬಳಿಯಿಂದ ಹೊರತಂದು ಲಾರಿಗೆ ಸಾಗಿಸಲು ಪ್ರಯತ್ನಿಸಲಾಯಿತು. ಆದರೆ ಕಾಫಿ ತೋಟದಿಂದ ಹೊರಬರಲು ನಿರಾಕರಿಸಿದ ಸಲಗ, ಸಾಕಾನೆಗಳೊಂದಿಗೆ ಕಾದಾಟ ನಡೆಸಿ ಮತ್ತೆ ತೋಟದೊಳಗೆ ನುಗ್ಗಲು ಯತ್ನಿಸಿತು.

ಸಾಕಾನೆಗಳೊಂದಿಗೆ ಕಾದಾಡಿದ ಸಲಗ

ಸುಗ್ರೀವ ಹಾಗೂ ಧನಂಜಯ ಎಂಬ ಸಾಕಾನೆಗಳು ಸಲಗವನ್ನು ಎಳೆದು ತರಲು ಮುಂದಾದಾಗ, ಅದು ದಂತದಿAದ ಸಾಕಾನೆಗಳಿಗೆ ಚುಚ್ಚುತ್ತಾ ಪ್ರತಿರೋಧ ತೋರಿತು. ಕೆಲಕಾಲ ನಡೆದ ಕಾದಾಟದಲ್ಲಿ ಸಾಕಾನೆಗಳಿಗೆ ಸಣ್ಣಪುಟ್ಟ ಗಾಯಗಳಾದವು. ಆದರೂ ಕಾರ್ಯಾಚರಣೆ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ತಂಡದ ಸಿಬ್ಬಂದಿ ಸಾಕಾನೆಗಳ ನೆರವಿನಿಂದ ಸಲಗವನ್ನು ಸುಮಾರು ಒಂದು ಕಿ.ಮೀ. ದೂರ ಎಳೆದುಕೊಂಡು ಬಂದು ಲಾರಿಗೆ ಸಾಗಿಸಿದರು. ಕಾರ್ಯಾಚರಣೆಗೆ ಸಾಕಾನೆಗಳಾದ ಲಕ್ಷö್ಮಣ, ಸುಗ್ರೀವ, ಅಜೇಯ, ಈಶ್ವರ, ಧನಂಜಯ ಸಹಕರಿಸಿದವು.

ಗೇಟ್ ಮುರಿದ ಪುಂಡಾನೆ

ಸಲಗವನ್ನು ಹಗ್ಗದ ಮೂಲಕ ಎಳೆದುಕೊಂಡು ಬರುತ್ತಿದ್ದ ಸಂದರ್ಭ ಮತ್ತೆ ಕಾಫಿ ತೋಟದೊಳಗೆ ನುಗ್ಗಲು ಪ್ರಯತ್ನಿಸಿತು. ಈ ವೇಳೆ ರೋಷಗೊಂಡ ಸಲಗವು ನಿಶ್ಚಿತ್ ಬಿದ್ದಪ್ಪ ಅವರಿಗೆ ಸೇರಿದ ತೋಟದ ಗೇಟನ್ನು ಮುರಿದು ಹಾಕಿತು.

ಕ್ರೇನ್‌ಗೂ ಗುದ್ದಿದ ಸಲಗ

ಲಾರಿಗೆ ಹತ್ತಿಸುವ ಸಂದರ್ಭದಲ್ಲಿ ಕೂಡ ಸಲಗ ತನ್ನ ಆಕ್ರೋಶ ಮುಂದುವರಿಸಿತು. ಲಾರಿಯ ಕಂಬಿಗಳಿಗೆ ಗುದ್ದಿದ ಸಲಗ, ತನ್ನನ್ನು ಲಾರಿಗೆ ಹತ್ತಿಸಲು ಬಳಸುತ್ತಿದ್ದ ಕ್ರೇನ್‌ಗಯ ಗುದ್ದಿತು. ಸಲಗದ ಪುಂಡಾಟಿಕೆಯನ್ನು ಕಂಡು ಸ್ಥಳದಲ್ಲಿದ್ದ ಗ್ರಾಮಸ್ಥರು ಭಯಭೀತರಾದರು.

ಇನ್ನೆರಡು ಆನೆಗಳ ಸೆರೆಗೆ ಕ್ರಮ

ಮುಂದಿನ ದಿನಗಳಲ್ಲಿ ಕಣ್ಣಂಗಾಲ ಗ್ರಾಮ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಇನ್ನೆರಡು ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲಾಗುವುದು ಎಂದು ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನುತಾ ಚೌಹಾಣ್ ತಿಳಿಸಿದ್ದಾರೆ.

ಮೂರು ಕಾಡಾನೆಗಳನ್ನು ಸೆರೆಹಿಡಿಯಲು ಸರ್ಕಾರ ಅನುಮತಿ ನೀಡಿದ್ದು, ಅದರಂತೆ ಇದೀಗ ಒಂದು ಸಲಗವನ್ನು ಸೆರೆಹಿಡಿಯಲಾಗಿದೆ. ಇನ್ನೊಂದು ದಿನದ ಅಂತರದಲ್ಲಿ ಉಳಿದ ಎರಡು ಕಾಡಾನೆಗಳ ಸೆರೆ ಕಾರ್ಯಾಚರಣೆ ನಡೆಸಲಾಗುವುದು. ಸೆರೆಹಿಡಿದ ಸಲಗವನ್ನು ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ೧೨೦ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಸ್ಥಳೀಯ ಗ್ರಾಮಸ್ಥರೂ ಕಾರ್ಯಾಚರಣೆಗೆ ಸಹಕಾರ ನೀಡಿದ್ದಾರೆ ಎಂದು ಅವರು ಹೇಳಿದರು.

ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ ಹಾಗೂ ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನುತಾ ಚೌಹಾಣ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಎಸಿಎಫ್ ತಹಸೀನ್ ಬಾನು, ವಲಯ ಅರಣ್ಯಾಧಿಕಾರಿಗಳಾದ ಶಿವರಾಮ್, ಗಂಗಾಧರ್, ಉಪವಲಯ ಅರಣ್ಯಾಧಿಕಾರಿಗಳು, ಆನೆ ಕಾರ್ಯಪಡೆ, ಆರ್‌ಆರ್‌ಟಿ ಹಾಗೂ ಇಟಿಎಫ್ ತಂಡದ ಸಿಬ್ಬಂದಿ, ವನ್ಯಜೀವಿ ವೈದ್ಯಾಧಿಕಾರಿಗಳಾದ ಡಾ ಮುಜೀಬ್ ಮತ್ತು ಡಾ ಆದರ್ಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮಳೆಯ ನಡುವೆಯೂ ನಡೆದ ಕಾರ್ಯಾಚರಣೆಯಲ್ಲಿ ಶಾರ್ಪ್ ಶೂಟರ್ ರಂಜನ್ ಅವರು ಗುರಿ ತಪ್ಪದೆ ಅರವಳಿಕೆ ಚುಚ್ಚುಮದ್ದು ಪ್ರಯೋಗಿಸುವ ಮೂಲಕ ಕಾರ್ಯಾಚರಣೆ ಯಶಸ್ವಿಯಾಗಲು ಪ್ರಮುಖ ಪಾತ್ರ ವಹಿಸಿದರು. ರಂಜನ್ ಅವರು ಈವರೆಗೆ ನೂರಕ್ಕೂ ಅಧಿಕ ಕಾಡಾನೆಗಳ ಸೆರೆ ಕಾರ್ಯಾಚರಣೆಯಲ್ಲಿ ಅರವಳಿಕೆ ಚುಚ್ಚುಮದ್ದು ಪ್ರಯೋಗಿಸಿದ್ದಾರೆ ಎಂದು ತಿಳಿದುಬಂದಿದೆ.