ವೀರಾಜಪೇಟೆ, ಆ. ೧೯: ನಗರದ ಎಫ್.ಎಂ.ಸಿ. ರಸ್ತೆಯ ಗಣೇಶ್ ವೈನ್ಸ್ ಹಾಗೂ ಇತಿಹಾಸ ಪ್ರಸಿದ್ಧ ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾ. ೧೭ರಂದು ನಸುಕಿನ ೨.೩೦ರಿಂದ ೨.೪೫ರ ನಡುವೆ ಕಳ್ಳ ಗಣೇಶ್ ವೈನ್ಸ್ನ ಬೀಗ ಮುರಿದು ಒಳನುಗ್ಗಿ ನಗದು ಪೆಟ್ಟಿಗೆಯಲ್ಲಿದ್ದ ೮ ಸಾವಿರ ಹಾಗೂ ಎರಡು ಕ್ವಾರ್ಟರ್ ಮದ್ಯದ ಬಾಟಲಿಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ.
ಅದೇ ರಾತ್ರಿ ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯದ ಬೀಗವನ್ನೂ ಮುರಿದು ಒಳನುಗ್ಗಿದ ಕಳ್ಳ, ಗರ್ಭಗುಡಿಯ ಸಮೀಪದಲ್ಲಿದ್ದ ಭಂಡಾರವನ್ನು ಒಡೆದು ಅದರಲ್ಲಿದ್ದ ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ. ಬೆಳಿಗ್ಗೆ ಎಂದಿನAತೆ ದೇವಾಲಯಕ್ಕೆ ಆಗಮಿಸಿದ ಅರ್ಚಕರು ಬೀಗ ಮುರಿದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಬೆರಳಚ್ಚು ತಜ್ಞರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ದೇವಾಲಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಪುಷ್ಪರಾಜ್ ಜೈನ್ ಅವರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪರಿಚಿತ ಕಳ್ಳನ ಪತ್ತೆಗೆ ಬಲೆಬೀಸಿದ್ದು, ತನಿಖೆ ಮುಂದುವರಿಸಿದ್ದಾರೆ.
- ಕಿಶೋರ್ ಕುಮಾರ್ ಶೆಟ್ಟಿ