ನಾಪೋಕ್ಲು, ಆ. ೧೯: ಯುವಜನರು ಸರ್ಕಾರದ ಹೊಸ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ನವೋದ್ಯಮಗಳ ಮೂಲಕ ಪ್ರಗತಿ ಸಾಧಿಸುವುದರ ಜೊತೆಗೆ ದೇಶದ ಪ್ರಗತಿಗೂ ಕೊಡುಗೆ ನೀಡಬೇಕು ಎಂದು ಪೆರಾಜೆ ಪ್ರಾಥಮಿಕ ಕೃಷಿಕರ ಸಹಕಾರ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಹೇಳಿದರು.

ಪೆರಾಜೆ ಪ್ರಾಥಮಿಕ ಕೃಷಿಕರ ಸಹಕಾರ ಸಂಘದ ೨೦೨೫-೨೬ನೇ ಸಾಲಿನ ೯ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರದ ಹೊಸ ನಿಯಮದಂತೆ ಕೆಸಿಸಿ ಸಾಲ ವಿತರಣೆಯಲ್ಲಿ ಡಿಜಿಟಲೀಕರಣ ಪ್ರಾರಂಭವಾಗಿದ್ದು, ನಿಯಮಾನುಸಾರ ಸಾಲ ಪಡೆಯಲು ಪಹಣಿಯಲ್ಲಿ ಜಂಟಿ ಖಾತೆ ಹೊಂದಿರುವವರು ಹಾಗೂ ಮೃತಪಟ್ಟಿರುವವರ ಹೆಸರುಗಳನ್ನು ತೆಗೆದು ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಂಘವು ೭೧.೬೭ ಲಕ್ಷ ಲಾಭ ಗಳಿಸಿದೆ. ರಬ್ಬರ್ ಮಾರಾಟ ಮಾಡಿದ ಸದಸ್ಯರಿಗೆ ಪ್ರತಿ ಕೆ.ಜಿ.ಗೆ ೧.೫೦ ಪ್ರೋತ್ಸಾಹಧನ ನೀಡಲು ಘೋಷಿಸಲಾಗಿದೆ. ೬೫.೦೩ ಲಕ್ಷ ನಿವ್ವಳ ಲಾಭದಲ್ಲಿ ಸದಸ್ಯರಿಗೆ ಶೇ.೧೦ ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಅಶೋಕ ಪಿ.ಎಂ., ನಿರ್ದೇಶಕರಾದ ಜಯರಾಮ ನಿಡ್ಯಮಲೆ, ಸೀತಾರಾಮ ಕದಿಕಡ್ಕ, ಧನಂಜಯ ಕೋಡಿ, ನಾರಾಯಣಪ್ಪ ಜತ್ತನಮನೆ, ಪ್ರಮೀಳಾ ಬಂಗಾರಕೋಡಿ, ಪುಷ್ಪಾವತಿ ಯಾಪಾರೆ, ಧೀನರಾಜ್ ದೊಡ್ಡಡ್ಕ, ಪ್ರದೀಪ ಕೆ.ಎಂ., ಜಯರಾಮ ಪಿ.ಟಿ., ಶೇಷಪ್ಪ ನಾಯ್ಕ ನಿಡ್ಯಮಲೆ, ಕಿರಣ ಬಂಗಾರಕೋಡಿ, ಕೊಡಗು ಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕಿ ವಿನಿತಾ ಬಿ.ಸಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಹೊದ್ದೆಟ್ಟಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಗೌತಮ್ ಪ್ರಾರ್ಥಿಸಿದರು. ಲೋಕೇಶ್ ಹೊದ್ದೆಟ್ಟಿ ಸ್ವಾಗತಿಸಿದರು. ಪ್ರಮೀಳಾ ಬಂಗಾರಕೋಡಿ ವಂದಿಸಿದರು.