ಕರಿಕೆ, ಆ. ೧೯: ಇಲ್ಲಿಗೆ ಸಮೀಪದ ಹದಿಮೂರನೇ ಮೈಲು ಹಾಗೂ ಪಚ್ಚೆಪಿಲಾವು ಪ್ರದೇಶದಲ್ಲಿ ಚಿರತೆ ಹಾವಳಿ ಮಿತಿಮೀರಿದ್ದು, ಮಂಗಳವಾರ ರಾತ್ರಿ ಮನೆಯ ಹಿತ್ತಲಿನಲ್ಲಿ ಕಟ್ಟಿಹಾಕಿದ್ದ ನಾಯಿಯನ್ನು ಸರಪಳಿ ಸಮೇತ ಚಿರತೆ ಹೊತ್ತೊಯ್ದ ಘಟನೆ ನಡೆದಿದೆ. ಹದಿಮೂರನೇ ಮೈಲಿನ ಎಸ್.ಕೆ. ಬಾಬು ನಾಯ್ಕ ಅವರ ಮನೆಯ ಹಿತ್ತಲಿನಲ್ಲಿ ಕಟ್ಟಿಹಾಕಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ಇದಕ್ಕೂ ಕೆಲ ದಿನಗಳ ಹಿಂದೆ ಪಚ್ಚೆಪಿಲಾವು ಪ್ರದೇಶದಲ್ಲಿಯೂ ಹಲವು ನಾಯಿಗಳನ್ನು ಚಿರತೆ ಹೊತ್ತೊಯ್ದಿರುವ ಘಟನೆಗಳು ನಡೆದಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮಾಹಿತಿ ತಿಳಿದು ಕರಿಕೆ ಉಪವಲಯ ಅರಣ್ಯಾಧಿಕಾರಿ ಪರಶುರಾಮ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೂಡಲೇ ಚಿರತೆಯನ್ನು ಸೆರೆಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.