ಮಡಿಕೇರಿ, ಆ. ೧೯: ‘ಹೋಮ್ಸ್’ ಸಂಸ್ಥೆಯಿAದ ಗದ್ದೆಹಳ್ಳದಲ್ಲಿ ಜಿಜಿಎ ನಾಟಿ ಉತ್ಸವ - ೨೦೨೬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಸಂಘಟಕರಾದ ಸನ್ಮಾನ್ ಹಾಗೂ ತೃಶಾಲ್ ಸನ್ಮಾನ್, ಮಕ್ಕಳಲ್ಲಿ ಕೃಷಿ ಬಗ್ಗೆ ಅರಿವು ಮೂಡಿಸುವುದು, ಗದ್ದೆಯಲ್ಲಿ ದಿನಕಳೆಯುವ ಅನುಭವ ನೀಡುವ ನಿಟ್ಟಿನಲ್ಲಿ ತಾ. ೨೨ ರಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸುಂಟಿಕೊಪ್ಪದ ಗದ್ದೆಹಳ್ಳದ ಕೃತಿಕಾ, ಸದಾನಂದ ಕರುಂಬಯ್ಯ ಅವರ ಗದ್ದೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ೩೦೦ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ನಾಟಿ ಮಾಡುವ ಅನುಭವದೊಂದಿಗೆ ವಿವಿಧ ರೀತಿಯ ಆಟೋಟ, ಸಾಂಸ್ಕೃತಿಕ ಕಾರ್ಯಕ್ರಮ, ಸುಸ್ಥಿರ ಪ್ರವಾಸೋದ್ಯಮದ ಬಗ್ಗೆ ಅರಿವು ಮೂಡಿಸಲಾಗುವುದು. ಇದೇ ಸಂದರ್ಭ ಶಕ್ತಿ ಪ್ರಶಸ್ತಿಯನ್ನು ಮಹಿಳಾ ಸಾಧಕರಿಗೆ ನೀಡಲಾಗುವುದು. ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾತಿಯಿದ್ದು, ೬ ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅವಕಾಶವಿದೆ ಎಂದು ವಿವರಿಸಿದರು. ಗೋಷ್ಠಿಯಲ್ಲಿ ಆಯೋಜಕರುಗಳಾದ ಪಾರ್ಥ ಭೀಮಯ್ಯ, ಪವಿತ್ರ, ಪ್ರದೀಶ್ ಹಾಜರಿದ್ದರು.