ಚೆಟ್ಟಳ್ಳಿ, ಆ. ೧೮ : ೮೦ನೇ ಸ್ವಾತಂತ್ರೋತ್ಸವದ ಅಂಗವಾಗಿ ಸೂರ್ಲಬ್ಬಿ ಗ್ರಾಮದ ೧೧೩ ವರ್ಷಗಳ ಇತಿಹಾಸ ಹೊಂದಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗ್ರಾಮದ ಹಿರಿಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಮಾಜಿ ಸೈನಿಕರು, ಮಹಿಳೆಯರು ಹಾಗೂ ಶಿಕ್ಷಕಿಯರು ಸ್ವಚ್ಛತಾ ಶ್ರಮದಾನ ನಡೆಸಿದರು.
ಸೋಮವಾರಪೇಟೆ ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರ್ಲಬ್ಬಿ ಗ್ರಾಮ ದಲ್ಲಿರುವ ಈ ಶಾಲೆಯ ಉಳಿವಿಗಾಗಿ ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಶಾಲೆಗಳು ಮುಚ್ಚುವ ಪರಿಸ್ಥಿತಿ ಎದುರಾಗಿರುವ ಸಂದರ್ಭದಲ್ಲಿ, ೧೧೩ ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮಸ್ಥರು ಕೈಗೊಂಡಿರುವ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಮಳೆಯನ್ನು ಲೆಕ್ಕಿಸದೆ ೮೬ ವರ್ಷದ ಹಿರಿಯರಿಂದ ಹಿಡಿದು ಕಿರಿಯರವರೆಗೆ ಹಲವರು ಉತ್ಸಾಹದಿಂದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಶಾಲಾ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಸ್ವಾತಂತ್ರೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಶ್ರಮದಾನದಲ್ಲಿ ಮುದ್ದಂಡ ತಿಮ್ಮಯ್ಯ, ನಾಣ್ಯಪ್ಪ, ಪಟ್ಟು ಸೋಮಯ್ಯ, ಓಡಿಯಂಡ ಶಿವಯ್ಯ, ಗೌಡಂಡ ಕಾರ್ಯಪ್ಪ, ತಂಬುಕುತ್ತೀರ ರೇಖಾ ಸೋಮಯ್ಯ, ನಾಪಂಡ ಸೈಲಾ ಶಿವಕುಮಾರ್, ಕುಂಬಾರಗಡಿಗೆ ಗ್ರಾಮದ ತೆಕ್ಕೆರ ತಮ್ಮಯ್ಯ, ಮಂಕ್ಯ ಗ್ರಾಮದ ಮೇದೂರ ಕಂಠೀ ನಾಣ್ಯಪ್ಪ, ಮುಟ್ಲು ಗ್ರಾಮದ ಪುದಿಯತಂಡ ಬೆಳ್ಳಿಯಪ್ಪ, ರವಿ ಕೆ., ಉದಿಯಂಡ ಶಾರದ, ಬೊಟ್ಟೋಳಳಂಡ ಭಾರತಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಮಾಜಿ ಸೈನಿಕರಾದ ತಂಬುಕುತ್ತೀರ ಗಪ್ಪು ಸೋಮಯ್ಯ, ರಘು ರಮೇಶ್ ಹಾಗೂ ನಾಪಂಡ ಲೋಹಿತ ಶಿವಕುಮಾರ್, ಶಾಲೆಯ ಅತಿಥಿ ಶಿಕ್ಷಕಿಯರಾದ ವಿಜಯಲಕ್ಷ್ಮಿ ಸೋಮಯ್ಯ ಮತ್ತು ರಶ್ಮಿ ರಮೇಶ್, ಶಾಲೆಯ ಬಿಸಿಯೂಟ ತಯಾರಕಿ ಕನ್ನಿಕಂಡ ನೀಲಮ್ಮ ಉಪಸ್ಥಿತರಿದ್ದರು.
ಶ್ರಮದಾನದಲ್ಲಿ ಭಾಗವಹಿಸಿದವರಿಗೆ ತಿಂಡಿ ಹಾಗೂ ಕಾಫಿಯ ವ್ಯವಸ್ಥೆಯನ್ನು ಮಾಜಿ ಸೈನಿಕ ಓಡಿಯಂಡ ಕಟ್ಟಿ ತಿಮ್ಮಯ್ಯ ಕಲ್ಪಿಸಿದ್ದರು.