ಸಿದ್ದಾಪುರ, ಆ. ೧೮: ಸಿದ್ದಾಪುರÀ ಸುತ್ತಮುತ್ತಲಿನ ಪ್ರದೇಶದಲ್ಲಿ ಆನೆ-ಮಾನವ ಸಂಘರ್ಷವನ್ನು ತಡೆಗಟ್ಟಲು ಶಾಶ್ವತ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿ ತಾ.೩೧ ರಂದು ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ.
ಸಿದ್ದಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕಾರ್ಮಿಕ ಸಂಘಟನೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಆನೆ-ಮಾನವ ಸಂಘರ್ಷವನ್ನು ತಡೆಗಟ್ಟಲು ಶಾಶ್ವತ ಯೋಜನೆ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ರೂಪಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಸಮ್ಮುಖದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಭಾಗವಹಿಸಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮಾತನಾಡಿ ಒಕ್ಕೂರಲಿನಿಂದ ನಿರ್ಧಾರ ಕೈಗೊಂಡು ಆನೆ ಮಾನವ ಸಂಘರ್ಷದಿAದ ಆಗುತ್ತಿರುವ ಪ್ರಮುಖ ಗ್ರಾಮಗಳಾದ ಅಮ್ಮತ್ತಿ, ಸಿದ್ದಾಪುರ, ಮಾಲ್ದಾರೆ, ಪಾಲಿಬೆಟ್ಟ, ಬಜೆಕೊಲ್ಲಿ, ನೆಲ್ಲಿಹುದಿಕೇರಿ, ಗ್ರಾಮಗಳ ವ್ಯಾಪ್ತಿಯಲ್ಲಿ ತಾ. ೩೧ ರಂದು ಬೆಳಿಗ್ಗೆ ೧೦ ರಿಂದ ಅಪರಾಹ್ನ ೩ ರವರೆಗೂ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಹೋರಾಟ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಕಾರ್ಮಿಕ ಮುಖಂಡ ಪಿ.ಆರ್. ಭರತ್ ಮಾತನಾಡಿ, ಕಳೆದ ವಾರ ಯಡೂರು ಗ್ರಾಮದಲ್ಲಿ ಕಾರ್ಮಿಕನನ್ನು ಕಾಡಾನೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರತಿಭಟನೆಗೆ ಮಣಿದ ಅರಣ್ಯ ಇಲಾಖೆ ಅಧಿಕಾರಿಗಳು ಮೂರು ಕಾಡಾನೆಗಳನ್ನು ಸೆರೆ ಹಿಡಿಯಲು ಅನುಮತಿ ಪಡೆದಿದ್ದಾರೆ. ಆದರೆ ಕಾಫಿ ತೋಟಗಳಲ್ಲಿ ನೂರಾರು ಕಾಡಾನೆಗಳು ಸಂಚರಿಸುತ್ತಿದ್ದು ಈ ಪೈಕಿ ೩ ಕಾಡಾನೆಗಳನ್ನು ಹಿಡಿದರೆ ಯಾವುದೇ ಪ್ರಯೋಜನ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ ಎಂದು ಆರೋಪಿಸಿದರು. ಶಾಶ್ವತ ಪರಿಹಾರವನ್ನು ಕಂಡುಕೊಳ್ಳದ ಸರ್ಕಾರಗಳ ವಿರುದ್ಧ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಬಂದ್ ಕರೆ ನೀಡಲಾಗಿದೆ. ಅಮಾಯಕರು ಕಾಡಾನೆಗಳ ದಾಳಿಗೆ ಬಲಿಯಾಗುತ್ತಿದ್ದು ಕೇವಲ ೨೦ ಲಕ್ಷ ರೂಪಾಯಿ ಸರಕಾರ ನೀಡಿ ಕೈ ತೊಳೆದುಕೊಳ್ಳುತಿದೆ. ಇದರಿಂದಾಗಿ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದಾಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಜೆಯಾಗುತ್ತಲೇ ಕರ್ಫ್ಯೂ ವಿಧಿಸಿದಂತ ವಾತಾವರಣ ನಿರ್ಮಾಣವಾಗಿದೆ. ಸರಕಾರಕ್ಕೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ತಾ. ೩೧ ರಂದು ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶಗಳಾದ ಪಾಲಿಬೆಟ್ಟ, ಬಜೆಕೊಲ್ಲಿ, ಅಮ್ಮತ್ತಿ, ಮಾಲ್ದಾರೆ, ನೆಲ್ಲಿಹುದಿಕೇರಿ ವ್ಯಾಪ್ತಿಯ ಎಲ್ಲಾ ಅಂಗಡಿ ಮುಂಗಟುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಮಾತನಾಡಿ, ಕಳೆದ ಎಂಟು ವರ್ಷಗಳ ಹಿಂದೆ ಸಿದ್ದಾಪುರ ಭಾಗದಲ್ಲಿ ಕಾಡಾನೆ ದಾಳಿಗೆ ಸಿಲುಕಿ ರೈತರೊಬ್ಬರು ಸಾವನ್ನಪ್ಪಿದ ಘಟನೆ ಸಂಬAಧಿಸಿ ಅಂದಿನ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯ ವಿರುದ್ಧ ಸಂಘಟನೆ ವತಿಯಿಂದ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಮತ್ತೆ ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿಯಿಂದಾಗಿ ಬೆಳೆದಂತಹ ಬೆಳೆಗಳು ಕೈಗೆ ಸಿಗುತ್ತಿಲ್ಲ, ಮಾನವನ ಮೇಲೆ ಕೂಡ ದಾಳಿ ಮುಂದುವರಿಯುತ್ತಿದೆ. ಜಿಲ್ಲೆಯ ಖಾಸಗಿ ಕಾಫಿ ತೋಟಗಳಲ್ಲಿ ಅಂದಾಜು ೩೦೦ಕ್ಕೂ ಅಧಿಕ ಕಾಡಾನೆಗಳು ಇರುವುದಾಗಿ ಈ ಹಿಂದಿನ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ ಸರ್ಕಾರವು ಗಂಭೀರವಾಗಿ ಪರಿಗಣಿಸದೆ ತಾತ್ಸಾರ ಮನೋಭಾವದಿಂದ ವರ್ತಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವನ್ಯಜೀವಿಗಳ ಹಾವಳಿಯಿಂದಾಗಿ ಜಿಲ್ಲೆಯ ಜನತೆಗೆ ನೆಮ್ಮದಿ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ರಾಜಕೀಯ ರಹಿತವಾಗಿ ಸಂಘಟನೆ ಯಾಗಿ ಇದರ ವಿರುದ್ಧ ಹೋರಾಟ ಮಾಡಬೇಕೆಂದು ಕರೆ ನೀಡಿದರು. ಜಿಲ್ಲೆಯಿಂದ ಸಾಕಷ್ಟು ತೆರಿಗೆ ಹಣ ಸರ್ಕಾರಕ್ಕೆ ಸಂದಾಯವಾಗುತ್ತಿದೆ. ಆದರೆ ಜಿಲ್ಲೆಯ ಸಮಸ್ಯೆಗೆ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಜಿಲ್ಲಾ ಕಾರ್ಮಿಕ ಮುಖಂಡ ಮಹದೇವ್ ಮಾತನಾಡಿ, ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಮುಂದುವರಿದಿದ್ದು, ಅಮಾಯಕರು ಕಾಡಾನೆಗಳ ದಾಳಿಗೆ ಸಿಲುಕಿ ಸಾವನ್ನಪ್ಪುವ ಘಟನೆ ನಡೆಯುತ್ತಿದೆ. ಕಾರ್ಮಿಕರು ಹಾಗೂ ರೈತರು ಒಗ್ಗಟ್ಟಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಜಿಲ್ಲೆಯಲ್ಲಿ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆಯ ನೆಪದಲ್ಲಿ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಓಡಿಸುವ ಮೂಲಕ ಅರಣ್ಯ ಇಲಾಖೆ ಸರ್ಕಾರದ ಹಣವನ್ನು ದುರುಪಯೋಗಪಡಿಸುತ್ತಿದೆ ಎಂದು ಆರೋಪಿಸಿದರು. ಆನೆ ಮಾನವ ಸಂಘರ್ಷದ ಹೋರಾಟವು ನಿರಂತರವಾಗಿ ಮುಂದುವರಿಯಬೇಕು, ಶಾಶ್ವತ ಯೋಜನೆ ರೂಪಿಸಬೇಕೆಂದು ಸರ್ಕಾರಕ್ಕೆ ಒತ್ತಡ ಹೇರಬೇಕೆಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಅಮತ್ತಿ ಹೋಬಳಿಯ ಅಧ್ಯಕ್ಷ ಚೇನಂಡ ಅಜಿತ್ ಪೂಣಚ್ಚ ಮಾತನಾಡಿ; ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಮುಂದುವರಿತಿದ್ದರು ಕೂಡ ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಕ್ರಿಯಾಯೋಜನೆಯನ್ನು ತಡವಾಗಿ ಸಿದ್ಧಪಡಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ದೂರಿದರು. ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶವಾಗಿದೆ. ವಾಹನಗಳು ಸಂಜೆ ಸಮಯದಲ್ಲಿ ಸಂಚರಿಸದAತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಿದ್ದಾಪುರ ಭಾಗಕ್ಕೆ ಉಪವಲಯ ಅರಣ್ಯ ಕಚೇರಿಯನ್ನು ಪ್ರಾರಂಭಿಸಿ ಉಪವಲಯ ಅರಣ್ಯ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ಒತ್ತಾಯಪಡಿಸಿದರು. ತಾ. ೩೧ ರಂದು ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಮ್ಮಿಕೊಂಡಿರುವ ಬಂದ್ ದಿನದಂದು ತೋಟದ ಮಾಲೀಕರು, ಕಾರ್ಮಿಕರು ಬೀದಿಗಿಳಿದು ಹೋರಾಟ ಮಾಡುವ ಮೂಲಕ ಸರಕಾರಕ್ಕೆ ಎಚ್ಚರಿಕೆಯನ್ನು ನೀಡುವ ಮೂಲಕ ಜಾಗೃತರಾಗಬೇಕೆಂದು ಕರೆ ನೀಡಿದರು. ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನ ಬಣದ ಅಧ್ಯಕ್ಷ ಸುರೇಶ್ ಎನ್. ಕೆ. ಮಾತನಾಡಿ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ಕಾರ್ಯಾಚರಣೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ; ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕು ಇಲ್ಲವಾದಲ್ಲಿ ಜಿಲ್ಲಾದ್ಯಂತ ಹೋರಾಟ ಮುಂದುವರಿಸಬೇಕೆAದು ಸಲಹೆ ನೀಡಿದರು. ಹೋರಾಟಗಳು ತಾತ್ಕಾಲಿಕವಾಗದೆ ನಿರಂತರ ಹೋರಾಟದಿಂದ ಸರಕಾರದ ಗಮನಸೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ತೋಟ ಕಾರ್ಮಿಕರ ಸಂಘದ ಮುಖಂಡ ಎನ್.ಡಿ.ಕುಟ್ಟಪ್ಪನ್ ಮಾತನಾಡಿ; ಈ ಹಿಂದಿನ ಸರಕಾರದ ಸಚಿವರು ಕಾಡಾನೆಗಳನ್ನು ಕಾಡಿಗಟ್ಟುವ ಮೂಲಕ ನಾಗರಹೊಳೆ ಅರಣ್ಯಕ್ಕೆ ಸ್ಥಳಾಂತರ ಮಾಡಲಾಗುವುದೆಂದು ಭರವಸೆ ನೀಡಿದ್ದರು. ಆದರೆ ಅದನ್ನು ಕಾರ್ಯರೂಪಕ್ಕೆ ತರದೆ ನಿರ್ಲಕ್ಷ ವಹಿಸಿದ್ದು ಇದೀಗ ಕಾಫಿ ತೋಟಗಳಲ್ಲಿ ಕಾಡಾನೆಗಳು ಸಂಚರಿಸುವAತಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೈಜ್ಞಾನಿಕವಾಗಿ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಸಮಸ್ಯೆಗೆ ಸ್ಪಂದಿಸಿ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಪಡಿಸಿದರು.
ಸಭೆಯಲ್ಲಿ ಸಿದ್ದಾಪುರ ಚೇಂಬರ್ ಆಫ್ ಕಾಮರ್ಸ್ ಸಂಘದ ಅಧ್ಯಕ್ಷ ಪಿ.ಎಂ. ರಾಜ್ ಕುಮಾರ್, ಆಟೋ ಚಾಲಕರ ಸಂಘದ ಪಿ.ಆರ್. ವಿನೋದ್, ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಾದ ಎ.ಸಿ. ಸಾಬು, ಎಚ್.ಬಿ. ರಮೇಶ್ ಮಾತನಾಡಿದರು.
ತಾ. ೩೧ರಂದು ಬೆಳಿಗ್ಗೆ ೧೦ ರಿಂದ ಅಪರಾಹ್ನ ೩ ರವರೆಗೂ ಬಂದ್ ನಡೆಸಲು ಸಭೆ ನಿರ್ಧರಿಸಿದ್ದು ಆ ದಿನ ಎಲ್ಲಾ ಶಾಲೆ -ಕಾಲೇಜುಗಳ ಆಡಳಿತ ಮಂಡಳಿಯ ಬಳಿ ಬೆಂಬಲ ಪಡೆಯುವ ಮೂಲಕ, ಬಂದ್ ನಡೆಸಿ ಸರ್ಕಾರದ ಗಮನ ಸೆಳೆಯಲಾಗುವುದು. ಇದರಲ್ಲೂ ಪರಿಹಾರ ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲೆಯ ವಿವಿಧ ಭಾಗದ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಸಾರ್ವಜನಿಕರು ಸಭೆಯಲ್ಲಿ ಹಾಜರಿದ್ದರು
ವರದಿ : ವಾಸು