ವಿಶೇಷ ವರದಿ : ಚನ್ನನಾಯಕ ಎಂ.ಎA.

ಪೊನ್ನAಪೇಟೆ, ಆ. ೧೮: ಕೃಷಿಯಲ್ಲಿ ನಷ್ಟವೇ ಹೆಚ್ಚು ಎಂದು ಬೇಸರಪಡುವವರ ನಡುವೆ, ಆಧುನಿಕ ತಂತ್ರಜ್ಞಾನ ಮತ್ತು ವೈವಿಧ್ಯಮಯ ಕೃಷಿಯಿಂದ ಯಶಸ್ಸು ಸಾಧಿಸಿ ಮಾದರಿಯಾಗಿದ್ದಾರೆ ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು ಗ್ರಾಮದ ರೈತ ಕೊಟ್ಟಂಗಡ ವಿಶು ಬೋಪಣ್ಣ. ಸಾಂಪ್ರದಾಯಿಕ ಕೃಷಿಗೆ ತಂತ್ರಜ್ಞಾನದ ಮೆರುಗು ನೀಡಿರುವ ಬೋಪಣ್ಣ ಅವರು ಮಳೆ ಕೊರತೆ ಹಾಗೂ ಕಾರ್ಮಿಕರ ಸಮಸ್ಯೆ ನಡುವೆಯೂ ಪ್ರತಿ ವರ್ಷ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.

ಮನೆಯ ಅಂಗಳದಲ್ಲೇ ಸಸಿ ಮಡಿ ತಯಾರಿ

ಸುಮಾರು ಒಂದೂವರೆ ಟ್ರ‍್ಯಾಕ್ಟರ್ ಒಣ ಮಣ್ಣನ್ನು ಸಂಸ್ಕರಿಸಿಕೊAಡು, ಅದಕ್ಕೆ ಸಗಣಿ ಗೊಬ್ಬರ ಮಿಶ್ರಣ ಮಾಡಿಕೊಳ್ಳಲಾಗುತ್ತದೆ. ನಂತರ ಆ ಮಣ್ಣನ್ನು ನೀರು ಹಾಕಿ ಹದವಾಗಿ ಕಲಸಿಕೊಳ್ಳಲಾಗುತ್ತದೆ. ನಂತರ ಮನೆಯ ಅಂಗಳದಲ್ಲಿಯೇ ಸಿಮೆಂಟ್ ನೆಲದ ಮೇಲೆ ಪ್ಲಾಸ್ಟಿಕ್ ಹಾಳೆಗಳನ್ನು ಹಾಸಿ, ಪಟ್ಟಿಗಳನ್ನು ಜೋಡಿಸಿ, ಮಿಶ್ರಣ ಮಾಡಿದ ಮಣ್ಣನ್ನು ಸುಮಾರು ೧ ಇಂಚು ದಪ್ಪಕ್ಕೆ ಹಾಕಿ, ಅದರ ಮೇಲೆ ಬಿತ್ತನೆ ಮಾಡಿ, ಸಸಿ ಮಡಿಗಳನ್ನು ತಯಾರು ಮಾಡಿಕೊಳ್ಳಲಾಗುತ್ತದೆ. ಈ ಮಡಿಗಳಲ್ಲಿ ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆದು, ಹಚ್ಚ ಹಸಿರಿನಿಂದ ಕಂಗೊಳಿಸುವುದಲ್ಲದೆ, ಯಾಂತ್ರಿಕ ನಾಟಿಗೆ ಸಿದ್ಧವಾಗುತ್ತವೆ.

ಈ ವಿಧಾನದ ಪ್ರಯೋಜನಗಳು

ಈ ವಿಧಾನ ಮಳೆ ಕೊರತೆಗೂ ಪರಿಹಾರವಾಗಿದೆ. ಮಳೆ ತಡವಾದರೆ ಸ್ಪಿçಂಕ್ಲರ್ ಮೂಲಕ ನೀರು ಹಾಯಿಸಬಹುದು. ಯಾಂತ್ರೀಕೃತ ನಾಟಿಗೆ ಈ ಸಸಿಗಳನ್ನು ಬಳಸುವುದರಿಂದ ೧೦ ಜನ ಕಾರ್ಮಿಕರು ಒಂದು ದಿನದಲ್ಲಿ ಮಾಡುವ ಕೆಲಸವನ್ನು ಒಬ್ಬರೇ ಯಂತ್ರದ ಸಹಾಯದಿಂದ ಕಡಿಮೆ ಅವಧಿಯಲ್ಲಿ ಮುಗಿಸಬಹುದು. ಮನೆಯ ಅಂಗಳದಲ್ಲೇ ಸಸಿ ಮಡಿ ಮಾಡುವುದರಿಂದ, ಭತ್ತ ತಿನ್ನುವ ಸಣ್ಣಪ್ರಾಣಿಗಳು, ಹಕ್ಕಿ-ಪಕ್ಷಿಗಳಿಂದ ಬೀಜ ನಾಶವಾಗುವುದನ್ನು ತಡೆಯಬಹುದು. ಸಸಿಗಳು ಒಂದೇ ಸಮನಾಗಿ ಬೆಳೆಯುವುದರಿಂದ ಯಾಂತ್ರಿಕ ನಾಟಿ ಸುಲಭ.

ಖರ್ಚು ಕಡಿಮೆ, ಇಳುವರಿ ಹೆಚ್ಚು

ಭತ್ತದ ಕೃಷಿಗೆ ಕಾರ್ಮಿಕರ ಕೊರತೆ ಮತ್ತು ವೆಚ್ಚ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಯಾಂತ್ರೀಕರಣವೇ ಅದಕ್ಕೆ ಪರಿಹಾರವಾಗಿದೆ. ಮಡಿ ತಯಾರಿ ಮತ್ತು ಯಾಂತ್ರಿಕ ನಾಟಿಯಿಂದ ಸಮಯ ಮತ್ತು ಹಣ ಎರಡೂ ಉಳಿತಾಯವಾಗುತ್ತದೆ.

ಕಳೆದ ೭ ವರ್ಷಗಳಿಂದ ಸುಮಾರು ೯ ಎಕರೆ ಗದ್ದೆಯಲ್ಲಿ ಈ ತಂತ್ರಜ್ಞಾನದ ಮೂಲಕ ನಾಟಿ ಮಾಡುತ್ತಿರುವ ಬೋಪಣ್ಣ ಪ್ರತಿ ವರ್ಷ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.

ವೈವಿಧ್ಯಮಯ ಕೃಷಿ

ಭತ್ತದ ಜೊತೆಗೆ ಕಾಫಿ, ಅಡಿಕೆ, ಕಾಳುಮೆಣಸು, ಮೀನುಗಾರಿಕೆಯಲ್ಲೂ ಬೋಪಣ್ಣ ಯಶಸ್ವಿಯಾಗಿದ್ದಾರೆ. ೩ ದನಗಳನ್ನು ಸಾಕಿದ್ದು, ಮನೆ ಬಳಕೆಗೆ ಹಾಲು ಮತ್ತು ಗದ್ದೆಗೆ ಸ್ವಲ್ಪ ಪ್ರಮಾಣದಲ್ಲಿ ಸಗಣಿ ಗೊಬ್ಬರ ದೊರೆಯುತ್ತದೆ. ಮಿಶ್ರಬೆಳೆ ಬೇಸಾಯ ಮಾಡುವುದರಿಂದ ಒಂದು ಬೆಳೆ ಕೈಕೊಟ್ಟರೆ ಇನ್ನೊಂದು ಬೆಳೆ ಕೈ ಹಿಡಿಯುತ್ತದೆ.

ಕೃಷಿಯಲ್ಲಿ ಆಧುನಿಕ ಯಾಂತ್ರೀಕರಣವನ್ನು ಅಳವಡಿಸಿಕೊಳ್ಳುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಿ, ರೈತರಿಗೆ ಹೆಚ್ಚಿನ ಲಾಭ ದೊರೆಯಲಿದೆ.

ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಕೊಡಗು ಜಿಲ್ಲೆಯ ಕೃಷಿಕರಿಗೆ ಬೋಪಣ್ಣ ಅವರ ಈ ಮಾದರಿ ಹೊಸ ಭರವಸೆ ಮೂಡಿಸಿದೆ. ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಗುಣಮಟ್ಟದ ಭತ್ತದ ಜೊತೆಗೆ ಲಾಭದಾಯಕ ಕೃಷಿ ಸಾಧ್ಯ ಎಂಬುದನ್ನು ಬೋಪಣ್ಣ ತೋರಿಸಿಕೊಟ್ಟಿದ್ದಾರೆ.