ಕುಶಾಲನಗರ, ಆ. ೧೮: ಕಾಡಾನೆಗಳ ಹಾವಳಿ ತಡೆಗಟ್ಟಿ ರೈತರ ಆಸ್ತಿ ಹಾನಿ ಹಾಗೂ ಬೆಳೆಗಳಿಗೆ ರಕ್ಷಣೆಗಾಗಿ ಕೋರಿ ಸುಂಟಿಕೊಪ್ಪ ರೈತ ಸಂಘದ ವತಿಯಿಂದ ಕುಶಾಲನಗರ ವಲಯ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಸುಂಟಿಕೊಪ್ಪ ಹೋಬಳಿಯ ಹೇರೂರು, ಕಲ್ಲೂರು, ನಾಕೂರು, ಶಿರಂಗಾಲ, ಕಂಬಿಬಾಣೆ, ಸುಂಟಿಕೊಪ್ಪ, ಕೊಡಗರಹಳ್ಳಿ ಹಾಗೂ ಕೆದಕಲ್ ಭಾಗಗಳ ರೈತರು ಪ್ರತಿಭಟನೆ ನಡೆಸಿ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.

ಕಾಡಾನೆ ಹಾವಳಿ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದ್ದು, ರೈತರು ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಕೋರಿ ಕಚೇರಿ ಮುಂದೆ ಸಂಜೆವರೆಗೂ ಧರಣಿ ಮುಂದುವರಿಸಿದರು.

ಕುಶಾಲನಗರ ವಲಯ ಅರಣ್ಯ ಅಧಿಕಾರಿ ಆರ್ ರಕ್ಷಿತ್ ಅವರು ಸಮಾಧಾನಿಸಲು ಯತ್ನಿಸಿದರೂ ಯಾವುದೇ ಪ್ರಯೋಜನ ಕಾಣದೆ ನಂತರ ಸ್ಥಳಕ್ಕೆ ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭೇಟಿ ನೀಡಿ ಇಲಾಖೆಯ ಮೂಲಕ ಆನೆ ಹಾವಳಿ ತಡೆಗಟ್ಟಲು ಕೈಗೊಂಡ ಕ್ರಮದ ಬಗ್ಗೆ ಪ್ರತಿಭಟನಾಕಾರರಿಗೆ ತಿಳಿಸಿ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅನಾಹುತ ಉಂಟಾಗದAತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಆದರೆ ಪ್ರತಿಭಟನಾಕಾರರು ಒಪ್ಪದೆ ತಾವು ಜಿಲ್ಲೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವ ತನಕ ಪ್ರತಿಭಟನೆ ಮುಂದುವರಿಸುವುದಾಗಿ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಂಜೆ ತನಕ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಇದ್ದ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಇದ್ದಲ್ಲಿ ಅರಣ್ಯ ಇಲಾಖೆಯ ಜಿಲ್ಲಾ ಕಚೇರಿ ಮುಂದೆ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.

ರೈತ ಸಂಘದ ಪ್ರಮುಖರಾದ ಕ್ಲೈವ್ ಪೊನ್ನಪ್ಪ, ಪದಾಧಿಕಾರಿಗಳಾದ ಚಂದ್ರಶೇಖರ್ ಹೇರೂರು ಮಾತನಾಡಿ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಕಾಡಾನೆ ನಾಡಿಗೆ ನುಗ್ಗಿ ಬೆಳೆಗೆ ಹಾನಿ ಉಂಟು ಮಾಡುತ್ತಿದೆ. ಸರಕಾರ ಶಾಶ್ವತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭ ಮಾತನಾಡಿದ ಬಿಜೆಪಿ ಪ್ರಮುಖರಾದ ಬಿ.ಬಿ. ಭಾರತೀಶ್ ರೈತರ ಹೋರಾಟಕ್ಕೆ ಬಿಜೆಪಿ ಧ್ವನಿ ಸೇರಿಸುವ ಬಗ್ಗೆ ತಿಳಿಸಿದರು. ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರೈತರ ಬದುಕಿಗೆ ರಕ್ಷಣೆ ನೀಡಲು ಕಾರ್ಯಯೋಜನೆ ರೂಪಿಸಬೇಕು ಎಂದು ಹೇಳಿದರು.

ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಭರವಸೆ ನೀಡುವ ತನಕ ಪ್ರತಿಭಟನೆ ಮುಂದುವರಿಯುವುದಾಗಿ ರೈತ ಮುಖಂಡರು ತಿಳಿಸಿದರು.

ಆನೆಗಳ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಶಾಶ್ವತ ಆನೆ ತಡೆಗೋಡೆ ಅಥವಾ ಸೋಲಾರ್ ಬೇಲಿ ನಿರ್ಮಾಣ, ಅರಣ್ಯ ಇಲಾಖೆ ವತಿಯಿಂದ ದಿನದ ೨೪ ಗಂಟೆಗಳ ಕಾಲ ಗಸ್ತು ಹಾಗೂ ವಿಶೇಷ ತಂಡ ನಿಯೋಜಿಸುವುದು, ರೈತರ ಬೆಳೆ ಹಾಗೂ ಆಸ್ತಿ ಪಾಸ್ತಿಗೆ ಉಂಟಾಗುತ್ತಿರುವ ಹಾನಿಗೆ ತ್ವರಿತ ಹಾಗೂ ಸಮರ್ಪಕ ಪರಿಹಾರ ನೀಡುವುದು ಮತ್ತು ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಲು ವಿಶೇಷ ಕಾರ್ಯ ಯೋಜನೆ ತಕ್ಷಣ ರೂಪಿಸಿ ಅನುಷ್ಠಾನಗೊಳಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದರು. ಬೆಂಗಳೂರಿನಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಶಾಸಕ ಡಾ ಮಂತರ್ ಗೌಡ ಅವರೊಂದಿಗೆ ಸಂಪರ್ಕಿಸಿ ಪ್ರತಿಭಟನೆಯ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಒಂದರAದು ಜಿಲ್ಲೆಯಲ್ಲಿ ನಡೆಯುತ್ತಿರುವ ಆನೆ ಮಾನವ ಸಂಘರ್ಷದ ಬಗ್ಗೆ ಚರ್ಚಿಸಲು ಹಿರಿಯ ಅರಣ್ಯ ಅಧಿಕಾರಿಗಳೊಂದಿಗೆ ಮತ್ತು ರೈತ ಪ್ರಮುಖರೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಬಿಜೆಪಿ ತಾಲೂಕು ಅಧ್ಯಕ್ಷÀ ಗೌತಮ್ ಗೌಡ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿ ತಕ್ಷಣ ಅರಣ್ಯ ಅಧಿಕಾರಿಗಳು ಆನೆ ಮಾನವ ಸಂಘರ್ಷಕ್ಕೆ ಕಡಿವಾಣ ಹಾಕಲು ಶಾಶ್ವತ ಯೋಜನೆ ರೂಪಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಮುಖರಾದ ಅರುಣ್ ಚಂಗಪ್ಪ, ದಾಸಂಡ ರಮೇಶ್ ಚಂಗಪ್ಪ, ಕುಂಜಲನ ಮಂಜುನಾಥ್, ಅಯ್ಯಣ್ಣ ನಾಕೂರು, ವಸಂತ್ ಹಾರನ ಬೈಲ್, ಹಿತೇಶ್ ಕಾನ್ ಬೈಲ್, ಜಗನಾಥ್ ಮಂದೋಡಿ, ಪ್ರಶಾಂತ್ ಕಲ್ಲೂರು, ಕಿರಣ್ ಪ್ರಕಾಶ್ ಮತ್ತಿತರರು ಇದ್ದರು.

ಪ್ರತಿಭಟನೆ ಹಿಂತೆಗೆತ

ಕಾಡಾನೆ ಹಾವಳಿ ತಪ್ಪಿಸಲು ಶಾಶ್ವತ ಕ್ರಮ ಕೈಗೊಳ್ಳುವಂತೆ ಕುಶಾಲನಗರ ವಲಯ ಅರಣ್ಯ ಕಚೇರಿಯ ಆವರಣದಲ್ಲಿ ಬೆಳಗಿನಿಂದ ಸಂಜೆವರೆಗೆ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಸಂಜೆ ೭ ಗಂಟೆಗೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಅಭಿಷೇಕ್ ಭೇಟಿ ನೀಡಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ಡಿಎಫ್‌ಓ ಅಭಿಷೇಕ್ ಮನವಿ ಸ್ವೀಕರಿಸಿ ನಂತರ ಮಾತನಾಡಿ, ಕುಶಾಲನಗರ ವಲಯ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಶಾಶ್ವತವಾಗಿ ತಪ್ಪಿಸಲು ಕೈಗೊಳ್ಳಬೇಕಾದ ಕಾಮಗಾರಿಯನ್ನು ಟೆಂಡರ್ ಕರೆಯುವ ಸಲುವಾಗಿ ಅಂದಾಜು ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ೫ ಕೋಟಿ ರೂ ವೆಚ್ಚದಲ್ಲಿ ಅಗತ್ಯ ರೈಲ್ವೇ ಬ್ಯಾರಿಕೇಡ್ ಮತ್ತಿತರ ಕಾಮಗಾರಿಗಳ ಮೂಲಕ ಕಾಡಾನೆಗಳ ಹಾವಳಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ದಿನದ ೨೪ ಗಂಟೆಗಳ ಕಾಲ ಕಾಡಾನೆಗಳ ಚಲನವಲನಗಳನ್ನು ಗಮನಿಸಲು ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುವುದು. ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ತನ್ನನ್ನು ಸಂಪರ್ಕಿಸಬಹುದು ಎಂದು ಅವರು ಪ್ರತಿಭಟನಾಕಾರರಿಗೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.

ಅರಣ್ಯ ಇಲಾಖೆಯ ಸೋಮವಾರಪೇಟೆ ಸಹಾಯಕ ಸಂರಕ್ಷಣಾಧಿಕಾರಿ ನವೀನ್ ಕುಮಾರ್, ವಲಯ ಅರಣ್ಯ ಅಧಿಕಾರಿ ರಕ್ಷಿತ್, ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್ ಮತ್ತಿತರರು ಇದ್ದರು.