ಸೋಮವಾರಪೇಟೆ, ಆ. ೧೭: ಕಾಫಿ ಮಂಡಳಿಯ ಸೋಮವಾರಪೇಟೆ ವಿಸ್ತರಣಾ ವಿಭಾಗದ ವತಿಯಿಂದ ತಾಲೂಕಿನ ಮಾದಾಪುರದ ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಗುಣಮಟ್ಟದ ಕಾಫಿ ಉತ್ಪಾದನೆ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕಾಫಿ ಮಂಡಳಿ ಉಪನಿರ್ದೇಶಕ ಡಾ.ವೆಂಕಟರೆಡ್ಡಿ ಮಾತನಾಡಿ, ಕಾಫಿಗೆ ಪ್ರಪಂಚದಲ್ಲಿ ಕಳೆದ ಎರಡು ವರ್ಷಗಳಿಂದ ಉತ್ತಮ ಬೆಲೆ ಸಿಗುತ್ತಿರುವುದು ಬೆಳೆಗಾರರಿಗೆ ಆಶಾದಾಯಕವಾಗಿದೆ. ಇದರಿಂದಾಗಿ ಕಾಫಿ ಬೆಳೆಯುವ ಕ್ಷೇತ್ರ ವಿಸ್ತರಣೆಯಾಗುತ್ತಿದ್ದು, ಉತ್ಪಾದನೆ ಹೆಚ್ಚಾಗುತ್ತಿದೆ ಎಂದರು.
ಕಾಫಿ ಫಸಲನ್ನು ದೇಶದ ಆಂತರಿಕವಾಗಿ ಶೇ.೪೦ ರಷ್ಟನ್ನು ಮಾತ್ರ ಬಳಕೆ ಮಾಡಿಕೊಳ್ಳುತ್ತಿದ್ದು, ಉಳಿದ ಶೇ.೬೦ರಷ್ಟು ರಫ್ತಾಗುತ್ತಿದೆ. ಹೊರದೇಶಕ್ಕೆ ರಫ್ತಾಗುವ ಕಾಫಿಯಲ್ಲಿ ಒಂದು ಚೀಲದ ಕಾಫಿಯಲ್ಲಿ ಕ್ರಿಮಿನಾಶಕ ಕಂಡುಬAದಲ್ಲಿ ರಫ್ತಾದ ಕಾಫಿ ಹಿಂದಕ್ಕೆ ಬರುತ್ತದೆ. ಆದ್ದರಿಂದ ಗುಣಮಟ್ಟದ ಕಾಫಿ ಉತ್ಪಾದನೆಯತ್ತ ಬೆಳೆಗಾರರು ಗಮನಹರಿಸಬೇಕು. ಅಕ್ಟೋಬರ್ ತಿಂಗಳ ನಂತರ ಕಾಫಿ ಗಿಡಗಳಿಗೆ ಕ್ರಿಮಿನಾಶಕ ಹೊಡೆಯುವುದನ್ನು ನಿಲ್ಲಿಸಬೇಕು. ತಂತ್ರಜ್ಞಾನ ಬಳಕೆ ಮಾಡಿಕೊಂಡು ಕಾಫಿ ಕೃಷಿಯನ್ನು ಮಾಡಬೇಕೆಂದರು.
ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ಉಪೇಂದ್ರಕುಮಾರ್ ಮಾತನಾಡಿ, ಕಾಫಿ ಮಂಡಳಿಯಿAದ ನೂತನವಾಗಿ ಕಾಫಿ ತೋಟ ಮಾಡಲು, ಹಳೆ ತೋಟಕ್ಕೆ ಹೊಸದಾಗಿ ಸಾಲು ಹಿಡಿದು ಗಿಡ ನೆಡಲು, ನೀರಾವರಿಗಾಗಿ ಸ್ಪಿçಂಕ್ಲರ್ ಸೇರಿದಂತೆ ಯಂತ್ರೋಪಕರಣಗಳ ಖರೀದಿಗೆ ಶೇ.೪೦ರಷ್ಟು ಸಹಾಯಧನ ನೀಡಲಾಗುತ್ತಿದೆ. ಇದನ್ನು ಎಲ್ಲ ಬೆಳೆಗಾರರು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಕಾಫಿ ಮಂಡಳಿ ವಿಸ್ತರಣಾಧಿಕಾರಿ ಸಂಗೀತ ಮಾತನಾಡಿ, ‘ಬೆಳೆಗಾರರ ಅಭಿವೃದ್ಧಿಯಿಂದ ದೇಶದ ಸಂಪತ್ತು’ ಎಂಬ ಧ್ಯೇಯವಾಕ್ಯದೊಂದಿಗೆ ಮಂಡಳಿ ಕೆಲಸ ಮಾಡುತ್ತಿದೆ. ಎಲ್ಲ ಕಾಫಿ ಬೆಳೆಗಾರರು ಕಚೇರಿಯೊಂದಿಗೆ ನಿಕಟ ಸಂಪರ್ಕವನ್ನು ಇರಿಸಿಕೊಂಡು ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಬೇಕೆಂದರು.
ವೇದಿಕೆಯಲ್ಲಿ ಕಾಫಿ ಬೆಳೆಗಾರರಾದ ಮಾಳೆಯಂಡ ಜೋಯಪ್ಪ ಹಾಗೂ ಬಾಚಿನಾಡಂಡ ಗಾಂಧಿ ಇದ್ದರು. ಇದೇ ಸಂದರ್ಭ ೧೫೦ಕ್ಕೂ ಹೆಚ್ಚಿನ ಕಾಫಿ ಬೆಳೆಗಾರರು ವಿವಿಧ ಯೋಜನೆಗಳಿಗೆ ಹೆಸರು ನೋಂದಾಯಿಸಿಕೊAಡರು.