ಕಣಿವೆ, ಆ. ೧೭: ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ರೈತರ ಸಂಕಷ್ಟ ಹೇಳತೀರದಂತಾಗಿದೆ. ತಾವು ಬೆಳೆದ ಬೆಳೆಯನ್ನು ಉಳಿಸಿಕೊಳ್ಳುವುದೇ ರೈತರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಇತ್ತೀಚೆಗೆ ಸುಂಟಿಕೊಪ್ಪ ಸಮೀಪದ ಹೇರೂರು ಗ್ರಾಮದಲ್ಲಿ ಆನೆಗಳ ಉಪಟಳ ಮಿತಿ ಮೀರಿದೆ. ನಿನ್ನೆ ಪ್ರಗತಿಪರ ಕೃಷಿಕರಾದ ಚಂದ್ರಶೇಖರ್ ಹೇರೂರು ಅವರ ತೋಟಕ್ಕೆ ಆನೆಯೊಂದು ಲಗ್ಗೆ ಇಟ್ಟು ಸುಮಾರು ೨೦ ಅಡಿಕೆ ಗಿಡ, ರೋಬಸ್ಟಾ ಕಾಫಿ ಫಸಲು ಮತ್ತು ತೆಂಗಿನ ಮರಗಳನ್ನು ನಾಶ ಮಾಡಿದೆ.
ಈ ಹಿಂದೆಯೂ ಇದೇ ತೋಟಕ್ಕೆ ಆನೆಗಳು ನುಗ್ಗಿ ಸುಮಾರು ೧೦೦ ಅಡಿಕೆ ಮರಗಳನ್ನು ಬುಡ ಸಮೇತ ಮುರಿದಿದ್ದವು. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿತ್ತು. ಆ ಘಟನೆಯ ನೋವು ಮಾಸುವ ಮುನ್ನವೇ ಈಗ ಮತ್ತೆ ಕಟಾವಿಗೆ ಬಂದಿದ್ದ ಕಾಫಿ ಮತ್ತು ಅಡಿಕೆ ಬೆಳೆ ನಾಶವಾಗಿರುವುದಕ್ಕೆ ರೈತರು ಕಣ್ಣೀರು ಹಾಕುತ್ತಿದ್ದಾರೆ.
ರೈತರು ಬೆಳೆದ ಫಸಲಿಗೆ ಸರಿಯಾದ ಬೆಲೆ ಸಿಗದೆ ಈಗಾಗಲೇ ನಷ್ಟದಲ್ಲಿದ್ದೇವೆ. ಈ ಬಾರಿ ಕಾಫಿಗೆ ಉತ್ತಮ ಬೆಲೆ ಇದ್ದರೂ ಆನೆಗಳು ಎಲ್ಲವನ್ನೂ ನಾಶ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಮೇ ತಿಂಗಳಿನಿAದ ಇಲ್ಲಿಯವರೆಗೆ ೧೦ ಬಾರಿ ಆನೆಗಳು ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡಿವೆ. ಆದರೆ ಇದುವರೆಗೂ ಯಾವುದೇ ಪರಿಹಾರ ಹಣ ಕೈಸೇರಿಲ್ಲ. ಈಗ ಮತ್ತೆ ಲಕ್ಷ ರೂ.ಗಳಷ್ಟು ನಷ್ಟವಾಗಿದೆ. ಅರಣ್ಯ ಇಲಾಖೆ ಆನೆ ಹಾವಳಿ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಕೂಡಲೇ ಪರಿಹಾರ ಹಣ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಅರಣ್ಯ ಇಲಾಖೆ ಕಚೇರಿ ಮುಂದೆ ರೈತರನ್ನು ಒಗ್ಗೂಡಿಸಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.