ಸಿದ್ದಾಪುರ, ಆ.೧೭; ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಓರ್ವ ಕಾರ್ಮಿಕ ಸ್ಥಳದಲ್ಲಿ ದುರ್ಮರಣಗೊಂಡು ಮತ್ತೋರ್ವ ಕಾರ್ಮಿಕ ಗಂಭೀರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾದ ಘಟನೆ ಸಿದ್ದಾಪುರ ಸಮೀಪದ ಕರಡಿ ಗೋಡು ಗ್ರಾಮದಲ್ಲಿ ಸಂಭವಿಸಿದೆ. ಮೂಲತಃ ಪಶ್ಚಿಮ ಬಂಗಾಳದ ಗೋಪಾಲ್ ಬೌರಿ(೩೪) ಮೃತಪಟ್ಟ ದುರ್ದೈವಿ.

ಇಂದು ಬೆಳಿಗ್ಗೆ ೯ ಗಂಟೆ ವೇಳೆಗೆ ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಅಮ್ಮತ್ತಿ ಶಾಖೆಯ ಸಿದ್ದಾಪುರ ಸಮೀಪದ ಘಟ್ಟದಳ್ಳ ಬಳಿಯ ಆರೆಂಜ್ ಕೌಂಟಿ ಸಂಸ್ಥೆಗೆ ಸೇರಿದ ಶಿಲ್ಪಿ ಕಾಫಿ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭ ಏಕಾಏಕಿ ಕಾಡಾನೆಯೊಂದು ದಾಳಿ ನಡೆಸಿ ಕಾರ್ಮಿಕರನ್ನು ಅಟ್ಟಾಡಿಸಿಕೊಂಡು ಹೋಗಿದೆ. ಕಾರ್ಮಿಕ ಗೋಪಾಲ್‌ನನ್ನು ಸುಮಾರು ದೂರದವರೆಗೆ ಅಟ್ಟಾಡಿಸಿಕೊಂಡು ಹೋಗಿ ದಾಳಿ ನಡೆಸಿದೆ. ತಪ್ಪಿಸಿಕೊಳ್ಳಲು ಓಡಿದರೂ ಬೆನ್ನಟ್ಟಿ ಕಾಲಿನಿಂದ ತುಳಿದು ಕೊಂದು ಹಾಕಿದೆ ಎಂದು ಸ್ಥಳೀಯ ಕಾರ್ಮಿಕರು ಮಾಹಿತಿ ನೀಡಿದ್ದಾರೆ. ನಂತರ ಘೀಳಿಡುತ್ತಾ ಪಶ್ಚಿಮ ಬಂಗಾಳ ರಾಜ್ಯದ ಮತ್ತೋರ್ವ ಕಾರ್ಮಿಕ ಜದಬ್ ಬೌರಿ (೩೩)ಎಂಬಾತನನ್ನು ಅಟ್ಟಾಡಿಸಿಕೊಂಡು ಹೋಗಿ ದಾಳಿ ನಡೆಸಿದ್ದು, ಆತನ ಸೊಂಟ ಹಾಗೂ ಕೈಗೆ ಗಂಭೀರ ಗಾಯವಾಗಿದೆ. ಈ ಸಂದರ್ಭದಲ್ಲಿ ಕಾಡಾನೆಯ ದಾಳಿಯಿಂದ ಪಾರಾಗಲು ಕಾರ್ಮಿಕರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಈ ವೇಳೆ ಗಣೇಶ ಎಂಬ ಕಾರ್ಮಿಕ ಬಿದ್ದು ಆತನ ಕಾಲಿಗೂ ಪೆಟ್ಟಾಗಿದೆ.

ಗಂಭೀರವಾಗಿ ಗಾಯಗೊಂಡ ಜದಬ್‌ನನ್ನು ಸಿದ್ದಾಪುರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಯಿತು. ಸಾವನ್ನಪ್ಪಿದ ಕಾರ್ಮಿಕ ಗೋಪಾಲ್ ಬೌರಿಯ ಮೃತ ದೇಹವನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಕಾರ್ಮಿಕರ ಆಕ್ರೋಷ

ಕಾಡಾನೆ ದಾಳಿಗೆ ಸಿಲುಕಿ ಸಾವನಪ್ಪಿದ ಘಟನೆ ಹಿನ್ನೆಲೆಯಲ್ಲಿ ಕಾರ್ಮಿಕರು ಆಕ್ರೋಶದಿಂದ ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟಿಸಿದರು. ತಮಗೆ ಜೀವ ಭಯದಿಂದ ಕೆಲಸ ನಿರ್ವಹಿಸುವಂತಹ ಪರಿಸ್ಥಿತಿ ಇದ್ದು ಕೆಲಸದ ಸಂದರ್ಭ ಸಂಸ್ಥೆ ವತಿಯಿಂದ ಹಾಗೂ ಅರಣ್ಯ ಇಲಾಖೆ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ವತಿಯಿಂದ ರಕ್ಷಣೆಗಾಗಿ ಸಿಬ್ಬಂದಿಯನ್ನು ನೇಮಿಸಬೇಕೆಂದು ಒತ್ತಾಯಿಸಿದರು. ವಿಚಾರ ತಿಳಿದು ಸ್ಥಳಕ್ಕೆ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ತೆರಳಿ ಕಾರ್ಮಿಕರನ್ನು ಸಮಾಧಾನಪಡಿಸಿ ವ್ಯವಸ್ಥಾಪಕರ ಬಳಿ ಕಾರ್ಮಿಕರಿಗೆ ಕೆಲಸ ಮಾಡುವ ಸಂದರ್ಭ ಸೂಕ್ತ ರಕ್ಷಣೆ ನೀಡುವಂತೆ ತಿಳಿಸಿದರು. ಘಟನೆಯ ಬಗ್ಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ, ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನೀತಾ ಚವಾಣ್, ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್ ಹಾಗೂ ಉಪವಲಯ ಅರಣ್ಯ ಅಧಿಕಾರಿಗಳು ಭೇಟಿ ನೀಡಿದರು.

ಸಾರ್ವಜನಿಕರಿಂದÀ ರಸ್ತೆ ತಡೆ

ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕ ಬಲಿಯಾದ ಘಟನೆ ಖಂಡಿಸಿ ಕಾರ್ಮಿಕ ಸಂಘಟನೆ ವತಿಯಿಂದ ಸಾರ್ವಜನಿಕರು ಕೆಲಕಾಲ ರಸ್ತೆ ತಡೆ ನಡೆಸಿದರು. ಇದರಿಂದಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು . ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮತ್ತು ಅರಣ್ಯ ಇಲಾಖೆಯ ವಿರುದ್ಧ ಧಿಕ್ಕಾರದ ಘೋಷಣೆಯನ್ನು ಕೂಗಿದರು. ಅಲ್ಲದೆ ಮೃತ ದೇಹವನ್ನು ನೇರವಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿ ಅಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಪಿ.ಆರ್. ಭರತ್ ಮಾತನಾಡಿ; ಸಿದ್ದಾಪುರ ಸುತ್ತಮುತ್ತಲ ಪ್ರದೇಶದಲ್ಲಿ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲಗೊಂಡಿವೆ. ಕಳೆದ ಒಂದು ವಾರಗಳ ಹಿಂದೆಯಷ್ಟೇ ಅಮ್ಮತ್ತಿ ಸಮೀಪದ ಯಡೂರು ಗ್ರಾಮದಲ್ಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಘಟನೆ ಸಂಭವಿಸಿದೆ. ಕಾಡಾನೆ ದಾಳಿಯಿಂದಾಗಿ ಮಾನವನ ಜೀವಕ್ಕೆ ಬೆಲೆ ಇಲ್ಲದಂತಾಗಿದ್ದು ಸಂಸ್ಥೆಯು ಕಾರ್ಮಿಕರಿಗೆ ಸೂಕ್ತ ರಕ್ಷಣೆ ನೀಡದಿರುವದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಾದ್ಯಂತ ದಿನನಿತ್ಯ ಆನೆ-ಮಾನವ ಸಂಘರ್ಷ ಮುಂದುವರಿಯುತ್ತಿದೆ. ಅಮಾಯಕರು ಬಲಿಯಾಗುತ್ತಿದ್ದಾರೆ. ಆದರೆ ಸರ್ಕಾರಗಳು ಎಚ್ಚೆತ್ತುಕೊಳ್ಳದಿರುವುದು ಸರಿಯಾದ ಕ್ರಮವಲ್ಲ ಎಂದರು.

ಕಾರ್ಮಿಕ ಮುಖಂಡ ಮಹಾದೇವ್ ಮಾತನಾಡಿ; ಕಾರ್ಮಿಕರು ಸಂಸ್ಥೆಯ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕಾರ್ಮಿಕರಿಗೆ ರಕ್ಷಣೆಗೆ ಸಿಬ್ಬಂದಿಗಳನ್ನು ನೇಮಕ ಮಾಡಬೇಕೆಂದು ತಿಳಿಸಿದ್ದರೂ ಕೂಡ ಸಂಸ್ಥೆ ನಿರ್ಲಕ್ಷö್ಯ ವಹಿಸಿದ ಹಿನ್ನೆಲೆಯಲ್ಲಿ ಇದೀಗ ಅಮಾಯಕ ಕಾರ್ಮಿಕರು ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಅರಣ್ಯ ಇಲಾಖೆಯು ಮೃತರ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಕಾರ್ಮಿಕ ಸಂಘಟನೆ ವತಿಯಿಂದ ಸದ್ಯದಲ್ಲಿಯೇ ಸಭೆ ಕರೆದು ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಒತ್ತಾಯಿಸಿ ಮುಂದಿನ ಹೋರಾಟದ ಬಗ್ಗೆ ದಿನಾಂಕ ನಿಗದಿ ಪಡಿಸಿ ಜಿಲ್ಲಾ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು. ಈ ಸಂದರ್ಭ ಕಾರ್ಮಿಕ ಮುಖಂಡ ಎನ್.ಡಿ.ಕುಟ್ಟಪ್ಪ.ಹೆಚ್.ಬಿ. ರಮೇಶ್, ಅನಿಲ್.ಎನ್.ಕೆ. ಹಾಗೂ ಸ್ಥಳೀಯ ಸಾರ್ವಜನಿಕರು ಭಾಗವಹಿಸಿದ್ದರು.

- ವಾಸು ಆಚಾರ್ಯ