ಸೋಮವಾರಪೇಟೆ, ಆ. ೧೭: ರೈತರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಸಿ ಮತ್ತು ಡಿ ಲ್ಯಾಂಡ್ ಸಮಸ್ಯೆಯ ಜೊತೆಗೆ ಇದೀಗ ಪಶ್ಚಿಮಘಟ್ಟ ರಕ್ಷಣೆಯ ನೆಪದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ಮಾಡಿ ರೈತರನ್ನು ಒಕ್ಕಲೆಬ್ಬಿಸಲು ಸರ್ಕಾರಗಳು ಮುಂದಾಗುತ್ತಿವೆ. ರೈತರು ಎಚ್ಚೆತ್ತುಕೊಳ್ಳದಿದ್ದರೆ ಬದುಕು ಬೀದಿಪಾಲಾಗಲಿದೆ. ಈ ಹಿನ್ನೆಲೆ ಹೋರಾಟ ಅನಿವಾರ್ಯವಾಗಿದೆ. ಚುನಾವಣೆ ಬಹಿಷ್ಕಾರದ ಬಗ್ಗೆಯೂ ಚಿಂತನೆ ಹರಿಸಬೇಕಿದೆ ಎಂದು ವಿವಿಧ ಗ್ರಾಮಗಳ ಮುಖಂಡರುಗಳು ಅಭಿಪ್ರಾಯಿಸಿದರು.
ರೈತ ಹೋರಾಟ ಸಮಿತಿಯ ನೇತೃತ್ವದಲ್ಲಿ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಸಿ ಮತ್ತು ಡಿ ಲ್ಯಾಂಡ್ ಸಮಸ್ಯೆ, ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸುವ ಬಗ್ಗೆ ನಡೆದ ಸಭೆಯಲ್ಲಿ ಭಾಗಿಯಾಗಿದ್ದ ಗ್ರಾಮಗಳ ಮುಖಂಡರುಗಳು ಈ ಬಗ್ಗೆ ಚರ್ಚೆ ನಡೆಸಿದರು.
ಪಶ್ಚಿಮಘಟ್ಟ ರಕ್ಷಣೆಯ ನೆಪದಲ್ಲಿ ಹಂತಹAತವಾಗಿ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನವನ್ನು ಎಲ್ಲಾ ಸರ್ಕಾರಗಳೂ ಮಾಡುತ್ತಾ ಬಂದಿವೆ. ರಾಜಕಾರಣಿಗಳನ್ನು ನಂಬಿಕೊAಡರೆ ರೈತರ ಉಳಿವು ಅಸಾಧ್ಯ. ಸಿ ಮತ್ತು ಡಿ ಲ್ಯಾಂಡ್ ಸಮಸ್ಯೆಯೊಂದಿಗೆ ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರುದ್ಧವೂ ಹೋರಾಟ ನಡೆಸಬೇಕು. ಅಗತ್ಯಬಿದ್ದರೆ ಮುಂಬರುವ ಎಲ್ಲಾ ಚುನಾವಣೆಗಳನ್ನೂ ಬಹಿಷ್ಕರಿಸಬೇಕೆಂದು ಸಭೆಯಲ್ಲಿ ಅಭಿಪ್ರಾಯಗಳು ವ್ಯಕ್ತವಾದವು.
ಸಭೆಯ ಅಧ್ಯಕ್ಷತೆ ವಹಿಸಿದ್ದ ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ ಮಾತನಾಡಿ, ಸಿ ಮತ್ತು ಡಿ ಭೂಮಿಗೆ ಸಂಬAಧಿಸಿದAತೆ ಈವರೆಗೆ ಹತ್ತಾರು ಹೋರಾಟಗಳನ್ನು ಮಾಡಲಾಗಿದೆ. ಮುಖ್ಯಮಂತ್ರಿ, ಸಚಿವರು, ಶಾಸಕರು ಅಧಿಕಾರಿಗಳನ್ನು ಭೇಟಿ ಮಾಡಿದ್ದೇವೆ. ಸರ್ಕಾರ ಸಮಿತಿ ರಚಿಸಿದೆ. ಈ ನಡುವೆ ಕಸ್ತೂರಿ ರಂಗನ್ ವರದಿ ಅನುಷ್ಠಾನ ಸಂಬAಧ ಕೇಂದ್ರದಿAದ ಅಧಿಸೂಚನೆ ಬಂದಿದ್ದು, ಆಕ್ಷೇಪಣೆ ಸಲ್ಲಿಸಲು ೬೦ ದಿನಗಳ ಗಡುವು ನೀಡಲಾಗಿದೆ ಎಂದರು.
ಈಗಾಗಲೇ ೨೦ ದಿನಗಳು ಕಳೆದಿದ್ದು, ಉಳಿದ ೪೦ ದಿನಗಳ ಒಳಗೆ ಎಲ್ಲಾ ಗ್ರಾಮಗಳಿಂದಲೂ ಆಕ್ಷೇಪಣೆ ಸಲ್ಲಿಸಬೇಕಿದೆ ಎಂದು ತಿಳಿಸಿದ ಅವರು, ರೈತರ ಬದುಕು ಬೀದಿಗೆ ಬರುತ್ತಿರುವ ಇಂತಹ ಸಂದರ್ಭದಲ್ಲಿ ಹೋರಾಟಕ್ಕೆ ಜನ ಸೇರಬಾರದೆಂದು ರಾಜಕೀಯ ಮುಖಂಡರು ಕೆಲವರಿಗೆ ಒತ್ತಡ ಹೇರುತ್ತಿದ್ದಾರೆ. ನಮ್ಮ ಬದುಕು ಬೀದಿಗೆ ಬಂದರೂ ಸಹ ಇವರಿಗೆ ರಾಜಕೀಯ ಮುಖ್ಯವಾಗಿದೆ. ಪಕ್ಷಾತೀತ ಹೋರಾಟ ಮಾಡಲೇಬೇಕಾಗಿದೆ ಎಂದರು.
ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಕೆಲವೊಂದು ಗ್ರಾಮಗಳನ್ನು ಅರಣ್ಯ ಎಂದು ಆರ್.ಟಿ.ಸಿ.ಯಲ್ಲಿ ನಮೂದು ಮಾಡಲಾಗಿದೆ. ರೈತರ ಮೇಲೆ ಸರ್ಕಾರ ಹಾಗೂ ಅರಣ್ಯ ಇಲಾಖೆಯಿಂದ ನಿರಂತರ ಕಿರುಕುಳ ನಡೆಯುತ್ತಲೇ ಇದೆ ಎಂದು ಸುರೇಶ್ ಚಕ್ರವರ್ತಿ ಆರೋಪಿಸಿದರು.
ಸಿ ಮತ್ತು ಡಿ ಹಾಗೂ ಕಸ್ತೂರಿ ರಂಗನ್ ವರದಿ ಅನುಷ್ಠಾನ ಬಗ್ಗೆ ವಿಸ್ತೃತ ಚರ್ಚೆ ಮಾಡಬೇಕು. ಈಗಾಗಲೇ ಸಮಿತಿಯ ಸದಸ್ಯರು ಬಂದು ಪರಿಶೀಲನೆ ನಡೆಸಿದ್ದಾರೆ. ಸಮಿತಿಯವರಿಗೆ ವಾಸ್ತವ ಮನವರಿಕೆ ಮಾಡಿಕೊಟ್ಟಿದ್ದೇವೆ. ಕಸ್ತೂರಿ ರಂಗನ್ ವರದಿಗೆ ಪ್ರತಿ ಗ್ರಾಮ, ಸಂಘ ಸಂಸ್ಥೆಯಿAದ ಆಕ್ಷೇಪಣೆಗಳು ಹೋಗಬೇಕು. ಕಳೆದ ಬಾರಿ ಗ್ರಾಮ ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳಿದ್ದರು. ಈಗ ಇಲ್ಲ. ಗ್ರಾಮ ಪಂಚಾಯಿತಿಗಳು ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಆಕ್ಷೇಪಣೆಗಳನ್ನು ನೇರವಾಗಿ ಕಳುಹಿಸಲು ಆಗುವುದಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಎಲ್ಲಾ ಗ್ರಾಮಗಳಿಂದ ಆಕ್ಷೇಪಣೆ ಸಲ್ಲಿಸಬೇಕು ಎಂದು ಹೋರಾಟ ಸಮಿತಿ ಕಾನೂನು ಸಲಹೆಗಾರ ಬಿ.ಜೆ. ದೀಪಕ್ ಹೇಳಿದರು.
ಕಸ್ತೂರಿ ರಂಗನ್ ವರದಿಯ ಪ್ರಕಾರ ರೆಡ್, ಆರೆಂಜ್, ಗ್ರೀನ್ ಜೋನ್ ಮಾಡಲಾಗಿದೆ. ರೆಡ್ ಜೋನ್ನಲ್ಲಿ ಯಾವುದೇ ಗಣಿಗಾರಿಕೆ, ಕಾರ್ಖಾನೆ, ಕೈಗಾರಿಕೆ ಮಾಡುವಂತಿಲ್ಲ. ಭೂಮಿಗೆ ಸಂಬAಧಿಸಿದAತೆ ದಾಖಲೆಗಳು ಇಲ್ಲದೆ ಇರುವವರು ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಬಗ್ಗನ ಅನಿಲ್ ಅಭಿಪ್ರಾಯಿಸಿದರು.
ಯಾವ ಪಕ್ಷದವರು ಅಧಿಕಾರಕ್ಕೆ ಬಂದರೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಶಾಸಕರು, ಸಂಸದರನ್ನು ಕರೆದು ಗ್ರಾಮ ಸಭೆ ನಡೆಸಿ ನಿರ್ಣಯ ಕೈಗೊಳ್ಳಬೇಕು. ೧೯೮೩ ರಲ್ಲಿ ರಾಜ್ಯ ಸರ್ಕಾರ ನೆಡುತೋಪು ಮಾಡಲು ಅರಣ್ಯ ಇಲಾಖೆಗೆ ಜಾಗ ಹಸ್ತಾಂತರ ಮಾಡಿದೆ. ಆದರೆ ಕೆಲವೆಡೆ ಮಾತ್ರ ನೆಡುತೋಪು ಮಾಡಿದ್ದಾರೆ. ಆಗಲೇ ಅರಣ್ಯದಿಂದ ವಾಪಸ್ ಪಡೆಯಲು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದಿದ್ದರೆ ಸಮಸ್ಯೆ ಬಗೆಹರಿಯುತಿತ್ತು ಎಂದರು.
ಮುಂದಿನ ಪ್ರತಿಭಟನೆಯನ್ನು ಸೋಮವಾರಪೇಟೆಯಲ್ಲಿಯೇ ಆಯೋಜಿಸಿ ಅರಣ್ಯ, ಕಂದಾಯ ಇಲಾಖಾ ಸಚಿವರು, ಕಾರ್ಯದರ್ಶಿಗಳನ್ನು ಸ್ಥಳಕ್ಕೆ ಕರೆಸಬೇಕು. ಇದರೊಂದಿಗೆ ಹಾಲಿ-ಮಾಜಿ ಶಾಸಕರು, ಸಂಸದರ ನೇತೃತ್ವದಲ್ಲಿ ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ಸಚಿವರು, ಪ್ರಧಾನಿಗಳನ್ನು ಭೇಟಿ ಮಾಡಬೇಕು. ಸಮಸ್ಯೆಯ ಬಗ್ಗೆ ಸುಪ್ರೀಂ ಕೋರ್ಟ್ ಗಮನ ಸೆಳೆಯಬೇಕು ಎಂದು ಬಗ್ಗನ ಅನಿಲ್ ಹೇಳಿದರು.
ಹರಗ ಗ್ರಾಮದ ಮಿಥುನ್ ಮಾತನಾಡಿ, ಕಸ್ತೂರಿ ರಂಗನ್, ಸಿ ಮತ್ತು ಡಿ, ಸೆಕ್ಷನ್೪, ಡೀಮ್ಡ್ ಫಾರೆಸ್ಟ್ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಲಿಖಿತವಾಗಿ ಬರೆದು ಸಾರ್ವಜನಿಕರು, ಅಧಿಕಾರಿಗಳು, ಜನಪ್ರತಿನಿಧಿಗಳ ಗಮನ ಸೆಳೆಯಬೇಕು. ಎಲ್ಲಾ ಗ್ರಾಮದಲ್ಲೂ ಮುಂಬರುವ ಎಲ್ಲಾ ಚುನಾವಣೆ ಬಹಿಷ್ಕಾರ ಮಾಡಬೇಕು. ಸಾಮೂಹಿಕ ಚುನಾವಣೆ ಬಹಿಷ್ಕಾರ ಮಾಡಿದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಜನರ ಬಳಿಗೆ ಬರುತ್ತಾರೆ ಎಂದರು.
ಎಲ್ಲಾ ಸಹಕಾರ ಸಂಘಗಳ ಮೂಲಕ ರೈತರ ಸಭೆ ಕರೆದು ಆಕ್ಷೇಪಣೆಯ ಬಗ್ಗೆ ನಿರ್ಣಯ ಮಾಡಿ ಸರ್ಕಾರಕ್ಕೆ ಸಲ್ಲಿಸಬೇಕೆಂದು ಗೌಡಳ್ಳಿ ವಿಎಸ್ಎಸ್ಎನ್ ಅಧ್ಯಕ್ಷ ಎಸ್.ಬಿ. ಭರತ್ ಕುಮಾರ್ ಹೇಳಿದರು.
ಕೇರಳದಲ್ಲಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಿದ್ದಾರೆ. ಅದೇ ಮಾದರಿಯಲ್ಲಿ ಇಲ್ಲೂ ಹೋರಾಟ ನಡೆಸಿ, ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಬೇಕು. ಸರ್ಕಾರದ ಬಳಿ ನಿಯೋಗ ತೆರಳಬೇಕು ಎಂದು ಜಿ.ಪಂ. ಮಾಜೀ ಅಧ್ಯಕ್ಷ ವಿ.ಎಂ. ವಿಜಯ ಹೇಳಿದರು. ಅಂತಿಮವಾಗಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಬೇಕೆಂಬ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ಸಮಿತಿ ಕಾರ್ಯದರ್ಶಿ ಕೂತಿ ದಿವಾಕರ್, ಪ್ರಮುಖರಾದ ಕೆ.ಎಂ. ಲೋಕೇಶ್, ಯೋಗೇಂದ್ರ, ಕೆ.ಟಿ. ಪರಮೇಶ್, ಬಸವರಾಜು, ಅನಂತರಾಮ್, ಸಿ.ಕೆ. ಮಲ್ಲಪ್ಪ, ಸೋಮಶೇಖರ್, ಶಿವದಾಸ್, ಗಪ್ಪು ಸೋಮಯ್ಯ, ಬೋಜೇಗೌಡ ಸೇರಿದಂತೆ ಇತರರು ಮಾತನಾಡಿದರು.