ಮಡಿಕೇರಿ, ಆ. ೧೬: ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪವಿತ್ರ ಕ್ಷೇತ್ರವಾದ ಭಾಗಮಂಡಲದ ಭಗಂಡೇಶ್ವರ ಸನ್ನಿಧಿಗೆ ಭೇಟಿ ನೀಡಿದರು. ಪತ್ನಿ ಉಷಾ ಸಹಿತವಾಗಿ ದೇವಾಲಯಕ್ಕೆ ಭೇಟಿಯಿತ್ತ ಸಿಎಂ ನಾಡಿನ ಸುಭಿಕ್ಷೆಗಾಗಿ ಪ್ರಾರ್ಥನೆ ಸಲ್ಲಿಸಿದರು.

ಇಂದು ಬೆಳಿಗ್ಗೆ ಸುಮಾರು ೧೧.೪೫ರ ವೇಳೆಗೆ ಮುಖ್ಯಮಂತ್ರಿ ಶಿವಕುಮಾರ್ ಅವರು ಭಾಗಮಂಡಲ ಕಾವೇರಿ ಕಾಲೇಜು ಮೈದಾನದ ಹೆಲಿಪ್ಯಾಡ್‌ಗೆ ಬಂದಿಳಿಯಬೇಕಿತ್ತಾದರೂ ಮುಖ್ಯಮಂತ್ರಿಗಳು ಬಂದು ತಲುಪುವಾಗ ಮಧ್ಯಾಹ್ನ ೧೨.೨೦ ಗಂಟೆಯಾಗಿತ್ತು. ಈ ನಡುವೆ ಮುಖ್ಯಮಂತ್ರಿಗಳನ್ನು ಬರಮಾಡಿಕೊಳ್ಳಲು ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎ.ಎಸ್. ಪೊನ್ನಣ್ಣ ಸೇರಿದಂತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ಕಾಂಗ್ರೆಸ್ ಪ್ರಮುಖ ಚಂದ್ರಮೌಳಿ, ವಕ್ತಾರ ಎಂ. ಲಕ್ಷö್ಮಣ್, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಮಂಗಳೂರು ವಲಯ ಐಜಿಪಿ ಅಮಿತ್ ಸಿಂಗ್, ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಜಿ.ಪಂ. ಸಿಇಓ ಆನಂದ್ ಪ್ರಕಾಶ್ ಮೀನಾ, ಡಿಸಿಎಫ್ ಅಭಿಷೇಕ್ ಸೇರಿದಂತೆ ರಾಜಕೀಯ ಪಕ್ಷಗಳ ಪ್ರಮುಖರು, ಕಾರ್ಯಕರ್ತರು, ವಿವಿಧ ಇಲಾಖೆಗಳ ಅಧಿಕಾರಿಗಳು, ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಹೆಲಿಪ್ಯಾಡ್ ಬಳಿ ಕಾದು ನಿಂತಿದ್ದರು. ಈ ವೇಳೆ ದಿಢೀರನೆ ಕೆಲ ಹೊತ್ತು ಮಳೆ ಸುರಿಯಿತು. ಸುರಿಯುವ ಮಳೆಯ ನಡುವೆಯೆ ನೆನೆಯುತ್ತಾ ಅಲ್ಲಿ ನೆರೆದಿದ್ದವರು ಸಿಎಂ ಡಿಕೆಶಿ ಆಗಮನಕ್ಕಾಗಿ ಎದುರು ನೋಡುತ್ತಿದ್ದರು. ಮಳೆಯ ನಡುವೆಯೆ ಸಿಎಂ ಆಗಮನವಾಯಿತು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಉಸ್ತುವಾರಿ ಸಚಿವ ನರೇಂದ್ರ ಸ್ವಾಮಿ ಜೊತೆಗಿದ್ದರು. ಪೊಲೀಸ್ ಇಲಾಖೆಯಿಂದ ಗೌರವ ವಂದನೆ ಸ್ವೀಕರಿಸಿ ಬಳಿಕ ಪಕ್ಷದಿಂದ, ಜಿಲ್ಲಾಡಳಿತದಿಂದ ಸ್ವಾಗತ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ಉತ್ತಮ ಮಳೆಯಾಗಲಿ ರಾಜ್ಯದ ಜಲಾಶಯಗಳು ಭರ್ತಿಯಾಗಲಿ ಎಂದು ಭಗಂಡೇಶ್ವರನಲ್ಲಿ ಪ್ರಾರ್ಥಿಸಲು ಬಂದಿರುವುದಾಗಿ ತಿಳಿಸಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಅಲ್ಲಿಂದ ಕಾರಿನ ಮೂಲಕ ಭಗಂಡೇಶ್ವರ ದೇವಾಲಯದತ್ತ ಸಾಗಿದರು.

ತ್ರಿವೇಣಿ ಸಂಗಮಕ್ಕೆ ತೆರಳಿ ತೀರ್ಥ ಕುಡಿದ ಸಿಎಂ, ಭಗಂಡೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿಸಿದರು.

ಸರ್ಕಾರದಿಂದ ಅಗತ್ಯ ಕ್ರಮ

ಭಾಗಮಂಡಲದ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ವನ್ಯಜೀವಿ ಮಾನವ ಸಂಘರ್ಷದ ಕುರಿತು ಪ್ರತಿಕ್ರಿಯಿಸಿ ಬಯಲು ಸೀಮೆಯ ಕಡೆ ಆಹಾರದ ಕೊರತೆ ಇರುವುದರಿಂದ ವನ್ಯಪ್ರಾಣಿಗಳು ಮಲೆನಾಡಿನತ್ತ ಬರುತ್ತಿವೆ. ಇದರಿಂದಾಗಿ ಕೊಡಗು ಜಿಲ್ಲೆಯಲ್ಲೂ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ನುಡಿದರು.

ಅಧಿಕ ಮಳೆಯಿಂದಾಗಿ ಕೊಡಗಿನ ರಸ್ತೆಗಳು ಹಾಳಾಗಿದ್ದು, ಕೃಷಿ, ತೋಟಗಾರಿಕಾ ಬೆಳೆಗಳು ನೆಲಕಚ್ಚಿವೆ. ಈ ದಿಸೆಯಲ್ಲಿ ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಯಾಗಿ ಈಗಷ್ಟೇ ಕಣ್ಣು ಬಿಡುತ್ತಿದ್ದು, ಹಣಕಾಸು ಇಲಾಖೆಯ ಪರಿಸ್ಥಿತಿಯನ್ನು ಅವಲೋಕಿಸಿ, ಮುಂದಿನ ದಿನಗಳಲ್ಲಿ ಈ ಕುರಿತು ಗಮನ ಹರಿಸಲಾಗುವುದು ಎಂದರು. ಭಗಂಡೇಶ್ವರದಲ್ಲಿ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದ ಸಿಎಂ ಮೇಕೆದಾಟು ಹೋರಾಟ ಸಂದರ್ಭ ನಮ್ಮ ನೀರು, ನಮ್ಮ ಹಕ್ಕು ಹೆಸರಿನಲ್ಲಿ ಪಾದಯಾತ್ರೆ ಕೈಗೊಂಡ ಸಂದರ್ಭ ತಾಯಿ ಕಾವೇರಿ ಮಾತೆ ಹಾಗೂ ಶ್ರೀ ಭಗಂಡೇಶ್ವರ ದೇವರಲ್ಲಿ ಯಶಸ್ಸು ದೊರೆಯಲೆಂದು ಪ್ರಾರ್ಥಿಸಲಾಗಿತ್ತು.

ಅದರಂತೆ ಪ್ರಾರ್ಥನೆಗೆ ಫಲಸಿಕ್ಕಿದೆ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೂ ಅವಕಾಶವಾಗಿದೆ ಎಂದು ಡಿ.ಕೆ. ಶಿವಕುಮಾರ್ ಸ್ಮರಿಸಿದರು. ನಾಡಿನ ಸುಭಿಕ್ಷೆಗಾಗಿ ಇಂದು ಭಗಂಡೇಶ್ವರನಲ್ಲಿ ಪ್ರಾರ್ಥಿಸಿದ್ದೇನೆ ಎಂದು ಮಾಹಿತಿಯಿತ್ತರು.