ಐಗೂರು, ಆ. ೧೬: ಐಗೂರಿನಲ್ಲಿ ನಿರ್ಮಿಸಲಾಗಿರುವ ನೂತನ ಸೇತುವೆ ಉದ್ಘಾಟನೆಗೂ ಮುನ್ನ ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಅವರು ಸೇತುವೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ವಾಹನ ಸಂಚಾರಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಶಾಸಕರು, ಬ್ರಿಟಿಷರ ಕಾಲದ ಕಬ್ಬಿಣದ ಸೇತುವೆ ಕಿರಿದಾಗಿದ್ದು, ಹಲವು ಕಡೆಗಳಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ೨೦೨೩-೨೪ನೇ ಸಾಲಿನಲ್ಲಿ ಅಂದಿನ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ಅಧಿವೇಶನದಲ್ಲಿ ನೂತನ ಸೇತುವೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿ ಭೂಮಿಪೂಜೆ ನೆರವೇರಿಸಿದ್ದರು. ಇದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಕಾಜೂರು ಪರ್ಯಾಯ ರಸ್ತೆಯು ಸಹ ಹದಗೆಟ್ಟಿದ್ದು, ತಾವು ಸ್ವತಃ ಆ ರಸ್ತೆಯಲ್ಲಿ ಸಂಚರಿಸಿದ ಸಂದರ್ಭದಲ್ಲಿ ಸಮಸ್ಯೆಯ ಅರಿವಾಗಿದೆ. ಮಳೆಗಾಲ ಮುಗಿದ ಬಳಿಕ ಪರ್ಯಾಯ ರಸ್ತೆಯನ್ನು ಡಾಂಬರೀಕರಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ನೂತನ ಸೇತುವೆಯ ಕಾಮಗಾರಿ ಗುಣಮಟ್ಟದಿಂದ ಕೂಡಿದ್ದು, ವಿಶಾಲವಾಗಿ ನಿರ್ಮಿಸಲಾಗಿದೆ. ಸೇತುವೆಯ ಎರಡೂ ಬದಿಗಳಲ್ಲಿ ಪಾದಚಾರಿ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸೇತುವೆ ಹಳೆಯ ಸೇತುವೆಗಿಂತ ಹೆಚ್ಚಿನ ಬಾಳಿಕೆ ಬಂದು ಇತಿಹಾಸ ನಿರ್ಮಿಸಲಿ ಎಂದು ಆಶಿಸಿದರು.
ಇದೇ ವೇಳೆ ಮಡಿಕೇರಿ-ದೋಣಿಗಲ್ ಎಸ್‌ಎಚ್ ರಸ್ತೆಯ ಅಭಿವೃದ್ಧಿಗೆ ೭೦೦ರಿಂದ ೮೦೦ ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು. ಕ್ಷೇತ್ರದ ಜನತೆಗೆ ಹೈಟೆಕ್ ರಸ್ತೆ ಸೌಲಭ್ಯ ಒದಗಿಸುವುದು ತಮ್ಮ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎ.ಡಬ್ಲುö್ಯ. ಕುಮಾರ್, ಸರ್ಕಾರಿ ಅಭಿಯಂತರ ವಿಜಯಕುಮಾರ್, ಎಸ್.ಎಂ. ಚಂಗಪ್ಪ, ಸಬಿತಾ ಚೆನ್ನಕೇಶವ, ಎಸ್.ಎನ್. ಧರ್ಮಪ್ಪ, ಯೋಗೇಶ್, ಕಡ್ಲೇರ ಹೊನ್ನಪ್ಪ, ರಮೇಶ್, ಕೆ.ಪಿ. ಮುತ್ತಪ್ಪ, ಎಂ.ಎನ್. ಅಶೋಕ್, ದಿನೇಶ್, ಗಣೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.