ಕೂಡಿಗೆ, ಆ. ೧೬: ಕೂಡಿಗೆ ವ್ಯಾಪ್ತಿಯಲ್ಲಿ ವೃದ್ಧನ ಮೇಲೆ ಬೀದಿನಾಯಿ ದಾಳಿ ನಡೆಸಿದ ಘಟನೆ ನಡೆದಿದೆ.
ಕೂಡಿಗೆ ಕೊಪ್ಪಲು ಗ್ರಾಮದ ರಂಗಪ್ಪ ಎಂಬವರು ಮನೆಯ ಮುಂಭಾಗ ಕುಳಿತಿದ್ದ ವೇಳೆ ಬೀದಿ ನಾಯಿಗಳ ಗುಂಪು ಏಕಾಏಕಿ ದಾಳಿ ನಡೆಸಿ ಕೈ ಹಾಗೂ ಕಾಲುಗಳಿಗೆ ಕಚ್ಚಿದ ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದು, ಅವರನ್ನು ಕುಶಾಲನಗರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ವಾರವೂ ಬೀದಿ ನಾಯಿಗಳ ಗುಂಪು ಶಾಲಾ ಬಾಲಕಿ ಮೇಲೆ ಹೆದ್ದಾರಿಯ ಮುಖ್ಯ ರಸ್ತೆಯಲ್ಲಿ ದಾಳಿ ನಡೆಸಿ ಗಾಯಗೊಳಿಸಿತ್ತು. ಅಲ್ಲದೆ ಸೋಮವಾರಪೇಟೆ-ಕುಶಾಲನಗರ ರಸ್ತೆಯಲ್ಲಿ ಮಹಿಳೆಯೊಬ್ಬರ ಮೇಲೂ ಬೀದಿ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ.