ಪದಕಲ್ಲು, ಆ. ೧೬: ಚೆಟ್ಟಿಮಾನಿ ಸಮೀಪದ ಪದಕಲ್ಲು ಗ್ರಾಮದ ಬಂಡಿಕಾಡು ಪ್ರದೇಶದಲ್ಲಿರುವ ಮೇಜರ್ ಮಂಗೇರಿರ ಮುತ್ತಣ್ಣ ಸ್ಮಾರಕದ ಸಮೀಪ ಚಿರತೆಯೊಂದು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇಬ್ರಾಹಿಂ ಅವರು ಚಿರತೆಯನ್ನು ಗಮನಿಸಿದ್ದು, ರಸ್ತೆಯನ್ನು ದಾಟಿ ಕೆಳಭಾಗದ ಗದ್ದೆ ಪ್ರದೇಶದ ಕಡೆಗೆ ಚಿರತೆ ತೆರಳಿರುವುದಾಗಿ ತಿಳಿಸಿದ್ದಾರೆ.

ಚೆಟ್ಟಿಮಾನಿ-ಪದಕಲ್ಲು ಭಾಗದಲ್ಲಿ ಕಳೆದ ಒಂದು ವಾರದಿಂದ ಚಿರತೆ ಸಂಚಾರ ಕಂಡುಬರುತ್ತಿದ್ದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ. ಜನವಸತಿ ಪ್ರದೇಶಗಳ ಸಮೀಪ ರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಚಿರತೆ ಸಂಚಾರದ ಬಗ್ಗೆ ಮಾಹಿತಿ ಇದ್ದರೂ ಅರಣ್ಯ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದಿರುವುದಕ್ಕೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಚಿರತೆಯ ಚಲನವಲನ ಪತ್ತೆಹಚ್ಚಲು ಕ್ಯಾಮೆರಾ ಟ್ರ‍್ಯಾಪ್ ಅಳವಡಿಸಬೇಕು. ಅಲ್ಲದೆ ರಾತ್ರಿ ಗಸ್ತು ಹೆಚ್ಚಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪದಕಲ್ಲು ಗ್ರಾಮದವರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ. ಚಿರತೆ ಕಂಡುಬAದಲ್ಲಿ ಸಾರ್ವಜನಿಕರು ಅದರ ಸಮೀಪ ತೆರಳದೆ, ಬೆನ್ನಟ್ಟದೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಜನರ ಜೀವಕ್ಕೆ ಅಪಾಯ ಎದುರಾಗುವವರೆಗೆ ಕಾಯದೆ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.