ಸೋಮವಾರಪೇಟೆ, ಆ. ೧೬: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವಾರ್ಷಿಕ ಮಹಾಸಭೆ ತಾ. ೩೦ ರಂದು ಮಾನಸ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಆರ್. ಉಮೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೦.೩೦ಕ್ಕೆ ಮಹಾಸಭೆ ನಡೆಯಲಿದ್ದು, ನಂತರ ಮಧ್ಯಾಹ್ನ ಸಂಘದ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ ಎಂದರು.
ಚುನಾವಣೆ ಪ್ರಯುಕ್ತ ಸಂಘದ ಕಚೇರಿಯಲ್ಲಿ ತಾ. ೨೩ ರಂದು ನಾಮಪತ್ರ ಸಲ್ಲಿಸಲು ಹಾಗೂ ತಾ. ೨೪ ರ ಸಂಜೆ ೫ ಗಂಟೆಯೊಳಗೆ ನಾಮಪತ್ರ ಹಿಂದಕ್ಕೆ ಪಡೆಯಲು ಅವಕಾಶ ಇದೆ. ನಂತರ ಸ್ಪರ್ಧಿಗಳಿಗೆ ಗುರುತಿನ ಚಿತ್ರ ನೀಡಲಾಗುವುದು. ಸಂಘದ ಸದಸ್ಯತ್ವ ನವೀಕರಿಸಿಕೊಂಡು ಹೋಗುತ್ತಿರುವವರಿಗೆ ಮಾತ್ರ ಮತದಾನದಲ್ಲಿ ಪಾಲ್ಗೊಳ್ಳಲು ಅವಕಾಶ ಇರುತ್ತದೆ. ಸಂಘದ ಕಚೇರಿಯಲ್ಲಿ ತಾ. ೧೮ ರಿಂದ ೨೨ ರವರೆಗೆ ಸದಸ್ಯರು ಸದಸ್ಯತ್ವ ಶುಲ್ಕ ಭರಿಸಿ ಸದಸ್ಯತ್ವವನ್ನು ನವೀಕರಿಸಿಕೊಳ್ಳಬಹುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ, ಖಜಾಂಚಿ ಶಶಿಕುಮಾರ್ ಇದ್ದರು.