ಪೊನ್ನಂಪೇಟೆ, ಆ. ೧೫: ಕಾಡಿನ ಸಂರಕ್ಷಣೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದ ಉದ್ದೇಶದಿಂದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ, ಕಾಡಂತಾರ ಫೌಂಡೇಶನ್ ಹಾಗೂ ಟ್ರಾನ್ಸ್ಫಾರ್ಮಿಂಗ್ ಟುಮಾರೋ ಫೌಂಡೇಶನ್ ಸಹಯೋಗದಲ್ಲಿ ಅರಣ್ಯ ಮಹಾವಿದ್ಯಾಲಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಆರೋಗ್ಯ ತಪಾಸಣಾ ಶಿಬಿರಕ್ಕೆ ಕಾಲೇಜಿನ ಡೀನ್ ಡಾ. ದೇವಗಿರಿ ಚಾಲನೆ ನೀಡಿದರು. ಶಿಬಿರದಲ್ಲಿ ಸುಮಾರು ೮೦ ಮಂದಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ, ಹಿಮೋಗ್ಲೋಬಿನ್ ಹಾಗೂ ರಕ್ತದ ಗುಂಪು ಪರೀಕ್ಷೆಗಳನ್ನು ನಡೆಸಲಾಯಿತು. ವೈದ್ಯಕೀಯ ಸಲಹೆ ಮತ್ತು ಮಾರ್ಗದರ್ಶನವನ್ನು ಉಚಿತವಾಗಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಹಾವು ಕಡಿತ ತಡೆಗಟ್ಟುವಿಕೆ ಹಾಗೂ ಪ್ರಥಮ ಚಿಕಿತ್ಸೆ ಕುರಿತು ವಿಶೇಷ ಜಾಗೃತಿ ಅಧಿವೇಶನ ನಡೆಯಿತು. ಹಾವುಗಳ ಕುರಿತು ಅರಿವು, ಮಿಥ್ಯೆಗಳು ಮತ್ತು ವಾಸ್ತವಾಂಶಗಳು, ಹಾವು ಕಡಿತದಿಂದ ಮುನ್ನೆಚ್ಚರಿಕೆ ವಹಿಸುವ ವಿಧಾನಗಳು, ಪ್ರಥಮ ಚಿಕಿತ್ಸೆ ಹಾಗೂ ಮಾಡಬೇಕಾದ ಮತ್ತು ಮಾಡಬಾರದ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.

‘ಇಂದಿನ ಮುನ್ನೆಚ್ಚರಿಕೆ, ಶಾಶ್ವತ ರಕ್ಷಣೆ’ ಎಂಬ ಆಶಯದೊಂದಿಗೆ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮವನ್ನು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಯೋಜನಾಧಿಕಾರಿ ಎಂ.ಕೆ. ಸುಬ್ರಮಣಿ ಹಾಗೂ ಸಹಾಯಕ ಯೋಜನಾಧಿಕಾರಿ ಡಾ. ಈಶ್ವರ ಅವರು ಸಂಯೋಜಿಸಿದ್ದರು.