ಚೆಟ್ಟಳ್ಳಿ, ಆ. ೧೫: ಚೇರಳ - ಶ್ರೀಮಂಗಲ ಗ್ರಾಮದ ಚೆಟ್ಟಳ್ಳಿಯಲ್ಲಿರುವ ಪುತ್ತರಿರ ಕುಟುಂಬಸ್ಥರ ಮನೆಗೆ ತೆರಳುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಅನುದಾನದಲ್ಲಿ ಹಾಗೂ ಕುಶಾಲನಗರ ಬ್ಲಾಕ್ ಅಧ್ಯಕ್ಷ ಶಶಿಧರ್ ಅವರ ಮಾರ್ಗದರ್ಶನದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಚೆಟ್ಟಳ್ಳಿ ಸ್ಥಳೀಯ ಕಾಂಗ್ರೆಸ್ ಅಧ್ಯಕ್ಷ ಪುತ್ತರಿರ ಪಪ್ಪು ತಿಮ್ಮಯ್ಯ ಅವರು ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಪುತ್ತರಿರ ಪಪ್ಪು ತಿಮ್ಮಯ್ಯ, ಚೇರಳ - ಶ್ರೀಮಂಗಲ ಗ್ರಾಮ ವ್ಯಾಪ್ತಿಯ ಶ್ರೀಮಂಗಲ ಭಗವತಿ ದೇವಸ್ಥಾನದ ರಸ್ತೆ, ಮುಳ್ಳಂಡ ಕುಟುಂಬಸ್ಥರ ಮನೆಗೆ ತೆರಳುವ ರಸ್ತೆ, ಈರಳೆ ಭಗವತಿ ದೇವಸ್ಥಾನದ ರಸ್ತೆ, ಚೆಟ್ಟಳ್ಳಿ - ಹೊಸಕೇರಿ ಸಂಪರ್ಕ ರಸ್ತೆ, ನೆಲ್ಲಿಹಡ್ಲು ರಸ್ತೆ, ಕರ್ಣಯ್ಯನ ಕುಟುಂಬಸ್ಥರ ಮನೆಗೆ ತೆರಳುವ ರಸ್ತೆ ಹಾಗೂ ತೇಕೇರಿ ರಸ್ತೆ ಸೇರಿದಂತೆ ಹಲವು ರಸ್ತೆ ಕಾಮಗಾರಿಗಳನ್ನು ಈಗಾಗಲೇ ಕಾಮಗಾರಿ ಪಟ್ಟಿಗೆ ಸೇರಿಸಲಾಗಿದೆ ಎಂದು ತಿಳಿಸಿದರು.
ಈ ಎಲ್ಲಾ ಕಾಮಗಾರಿಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಅವರು ಅಗತ್ಯ ಅನುದಾನವನ್ನು ಬಿಡುಗಡೆ ಮಾಡಿದ್ದು, ಹಲವು ಕಾಮಗಾರಿಗಳು ಈಗಾಗಲೇ ಆರಂಭಗೊAಡಿವೆ. ಮುಂದಿನ ಎರಡು ತಿಂಗಳೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ನಂತರ ಶಾಸಕರು ರಸ್ತೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಅವರು ಹೇಳಿದರು.
ಚೆಟ್ಟಳ್ಳಿ ಸ್ಥಳೀಯ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ರಾಫಿಕ್, ಕಾರ್ಯದರ್ಶಿ ಝುಬೇರ್, ಪುತ್ತರಿರ ರಾಜೇಶ್ ಮುತ್ತಪ್ಪ, ಗುತ್ತಿಗೆದಾರ ಮಂಜುನಾಥ್ ಸೇರಿದಂತೆ ಸ್ಥಳೀಯರು ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.