ಕರಿಕೆ, ಆ. ೧೫: ಕುಶಾಲನಗರದ ಗಂಧದ ಕೋಟೆಯ ಅರಣ್ಯ ತರಬೇತಿ ಕೇಂದ್ರದಲ್ಲಿ ಶಾಲಾ ಮಕ್ಕಳಿಗೆ ಚರ್ಚಾ ಸ್ಪರ್ಧೆ ಏರ್ಪಡಿಸುವ ಮೂಲಕ ವಿಶೇಷವಾಗಿ ವಿಶ್ವ ರೆಂಜರ್ ದಿನಾಚರಣೆಯನ್ನು ಆಚರಿಸಲಾಯಿತು.
ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಅರಣ್ಯ ಅಧಿಕಾರಿಗಳ ಸ್ಮರಣೆಗೆ ಅಂತರರಾಷ್ಟಿçÃಯ ಮಟ್ಟದಲ್ಲಿ ಜುಲೈ ೩೧ ರ ದಿನವನ್ನು ವಿಶ್ವ ರೇಂಜರ್ ದಿನವೆಂದು ಆಚರಣೆ ಮಾಡಲಾಗುತ್ತದೆ. ಇದರ ಅಂಗವಾಗಿ ಸೋಮವಾರಪೇಟೆ ತಾಲೂಕಿನ ಪ್ರೌಢಶಾಲೆ ಮಕ್ಕಳಿಗೆ ಪರಿಸರ ಸಂರಕ್ಷಣೆಯ ಮಹತ್ವ ಹಾಗೂ ಪಶ್ಚಿಮಘಟ್ಟಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಶ್ಚಿಮ ಘಟ್ಟಗಳು ಹಾಗೂ ಕಸ್ತ್ತೂರಿ ರಂಗನ್ ವರದಿ ಅಭಿವೃದ್ಧಿಗೆ ಮಾರಕವೇ? ಎಂಬ ವಿಷಯದ ಕುರಿತು ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಶಾಲನಗರ ಅರಣ್ಯ ತರಬೇತಿ ಕೇಂದ್ರದ ಅರಣ್ಯ ಸಂರಕ್ಷಣಾ ಅಧಿಕಾರಿ ಗಾನಶ್ರೀ ಕೆ.ವಿ. ವಹಿಸಿದ್ದರು. ನೆರೆದಿದ್ದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸಸ್ಯ ಚಿತ್ರ ಪ್ರದರ್ಶನ, ಪಶ್ಚಿಮಘಟ್ಟಗಳ ಕುರಿತು ವಿಚಾರ ಸಂಕೀರ್ಣ ಹಾಗೂ ಔಷಧೀಯ ಸಸ್ಯಗಳ ವಿತರಣೆ ಮಾಡಲಾಯಿತು.
ಚರ್ಚಾ ಸ್ಪರ್ಧೆಯಲ್ಲಿ ಕೂಡಿಗೆ ಸೈನಿಕ ಶಾಲೆಯ ವಿದ್ಯಾರ್ಥಿ ಮಿಥುನ್ ಗೌಡ ಪ್ರಥಮ ಸ್ಥಾನ, ಜ್ಞಾನಗಂಗಾ ಶಾಲೆಯ ತನ್ಮಯ ದ್ವಿತೀಯ ಸ್ಥಾನ, ಕಾವೇರಿ ಆಂಗ್ಲ ಮಾಧ್ಯಮ ಶಾಲೆ ಶನಿವಾರಸಂತೆಯ ತನ್ವಿ ಪಟೇಲ್ ತೃತೀಯ ಸ್ಥಾನ ಹಾಗೂ ಸಮಾಧಾನಕರ ಬಹುಮಾನವನ್ನು ಕೊಡಗರಹಳ್ಳಿಯ ಪ್ರನಮ್ಯ ಲಕ್ಷ್ಮಿ ಮತ್ತು ಯಶಸ್ ಜಿ. ಶಿರಂಗಾಲ ಅವರು ಪಡೆದುಕೊಂಡರು.
ಮುಖ್ಯ ಅತಿಥಿಗಳಾಗಿ ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಉಪಸ್ಥಿತರಿದ್ದರು. ಕಾರ್ಯ ಕ್ರಮದಲ್ಲಿ ಉಪವಲಯ ಅರಣ್ಯ ಅಧಿಕಾರಿ ಐಶ್ವರ್ಯ ಆರ್. ಗೌಡರ್, ಕನ್ನಡ ಕುಸುಮ, ನಳಿನಿ ಕೆ.ಕೆ., ಗಸ್ತು ಅರಣ್ಯಪಾಲಕ ರಘು ಪಾಲ್ಗೊಂಡಿದ್ದರು.