ಸಿದ್ದಾಪುರ, ಆ. ೧೪: ಸ್ಕೂಟರ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಕಾಲಿಗೆ ಗಾಯವಾಗಿರುವ ಘಟನೆ ನೆಲ್ಲಿಹುದಿಕೇರಿ ಗ್ರಾಮದ ಸಮೀಪದ ಅತ್ತಿಮಂಗಲ ಬಳಿಯ ಅರೆಕಾಡು ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ನೆಲ್ಲಿಹುದಿಕೇರಿ ಗ್ರಾಮದ ಎಂ.ಜಿ. ಕಾಲೋನಿ ನಿವಾಸಿ ಸಜಿತ್ (೪೫) ಗಾಯಗೊಂಡವರು. ಅವರು ಬೆಳಿಗ್ಗೆ ೮.೧೫ರ ಸುಮಾರಿಗೆ ಸ್ಕೂಟರ್‌ನಲ್ಲಿ ಮಡಿಕೇರಿಗೆ ತೆರಳುತ್ತಿದ್ದಾಗ ಅತ್ತಿಮಂಗಲ ಸಮೀಪದ ಅರೆಕಾಡು ರಸ್ತೆಯಲ್ಲಿ ಕಾಫಿ ತೋಟದಿಂದ ಏಕಾಏಕಿ ರಸ್ತೆಗೆ ಬಂದ ಕಾಡಾನೆ ಸ್ಕೂಟರ್ ಮೇಲೆ ದಾಳಿ ನಡೆಸಿದೆ.

ದಾಳಿಯಿಂದ ಸಜಿತ್ ಅವರ ಕಾಲಿಗೆ ಗಾಯವಾಗಿದ್ದು, ಸ್ಥಳೀಯರು ಅವರನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದರು. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕುಶಾಲನಗರ ವಲಯದ ಮೀನುಕೊಲ್ಲಿ ಶಾಖೆಯ ಅರಣ್ಯ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಸಜಿತ್ ಅವರನ್ನು ಮಡಿಕೇರಿಗೆ ಕರೆದೊಯ್ಯಲಾಯಿತು. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಗ್ರಾಮಸ್ಥರು ಆತಂಕದಲ್ಲಿ ಬದುಕುವಂತಾಗಿದೆ. ಅರೆಕಾಡು ರಸ್ತೆಯಲ್ಲಿ ಈ ಹಿಂದೆಯೂ ವಾಹನಗಳ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆಗಳು ನಡೆದಿವೆ. ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯ ರೈತ ಸಂಘದ ಅಮ್ಮತ್ತಿ ಹೋಬಳಿ ಅಧ್ಯಕ್ಷ ಚೇನಂಡ ಅಜಿತ್ ಪೂಣಚ್ಚ ಗಾಯಾಳು ಸಜಿತ್ ಅವರ ಆರೋಗ್ಯ ವಿಚಾರಿಸಿದರು.

ನಂತರ ಮಾತನಾಡಿದ ಅವರು, ನೆಲ್ಲಿಹುದಿಕೇರಿ ಗ್ರಾಮದ ಬೆಟ್ಟದಕಾಡು, ಬರಡಿ ಹಾಗೂ ನಲ್ವತ್ತೇಕರೆ ಭಾಗದ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡು ಬಿಟ್ಟು ದಾಂಧಲೆ ನಡೆಸುತ್ತಿವೆ. ಕೃಷಿ ಫಸಲುಗಳನ್ನು ನಾಶಪಡಿಸು ತ್ತಿರುವುದರಿಂದ ರೈತರಿಗೆ ಅಪಾರ ನಷ್ಟವಾಗುತ್ತಿದ್ದು, ಬೆಳೆ ಕೈಗೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿದ ಹಿನ್ನೆಲೆ ಮೀನುಕೊಲ್ಲಿ ಶಾಖೆಯ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿದರು.