ಶನಿವಾರಸಂತೆ, ಆ. ೧೪: ಮಕ್ಕಳ ಬಾಲ್ಯವಸ್ಥೆಯಿಂದಲೇ ಗ್ರಂಥಾಲಯದಲ್ಲಿ ಓದುವ ಅಭ್ಯಾಸವನ್ನು, ಹವ್ಯಾಸವನ್ನು ಬೆಳೆಸಿದರೆ ಅವರಲ್ಲಿ ಏಕಾಗ್ರತೆ ತಾನಾಗಿಯೇ ಮೂಡುತ್ತದೆ ಎಂದು ಸೋಮವಾರಪೇಟೆ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯದ ಅರಿವು ಕೇಂದ್ರದಲ್ಲಿ ನಡೆದ ರಾಷ್ಟಿçÃಯ ಗ್ರಂಥಾಲಯ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಓದುವಿಕೆ ಕಡಿಮೆಯಾಗಿದ್ದು, ಇತರ ಚಟುವಟಿಕೆಗಳ ಆಕರ್ಷಣೆಗಾಗಿ ಗ್ರಂಥಾಲಯಕ್ಕೆ ಬರುತ್ತಾರೆ. ಪಿಡಿಓಗಳು ಗ್ರಂಥಾಲಯದತ್ತ ಗಮನಹರಿಸಬೇಕು. ಶಾಲೆಗಳಿಗೆ ಭೇಟಿ ನೀಡಬೇಕು. ಗ್ರಂಥಾಲಯ ಹಾಗೂ ಶಾಲೆಗಳು ಸರ್ಕಾರದ ಆಸ್ತಿ ಎಂದರು.
ಮುಖ್ಯ ಅತಿಥಿ ಪತ್ರಕರ್ತೆ ಶ.ಗ. ನಯನತಾರಾ ಮಾತನಾಡಿ, ಭಾರತದ ಗ್ರಂಥಾಲಯ ಪಿತಾಮಹಾ ಡಾ. ಎಸ್.ಆರ್. ರಂಗನಾಥನ್ ಅವರ ಜನ್ಮ ದಿನದ ನೆನಪಿಗಾಗಿ ರಾಷ್ಟಿçÃಯ ಗ್ರಂಥಾಲಯ ದಿನ ಹಾಗೂ ಗ್ರಂಥಪಾಲಕರ ದಿನವನ್ನು ಆಚರಿಸಲಾಗುತ್ತದೆ. ಗ್ರಂಥಾಲಯ ಕೇವಲ ಗ್ರಂಥಗಳ ಸಂಗ್ರಹವಲ್ಲ; ಜ್ಞಾನದ ಕೇಂದ್ರ. ಜ್ಞಾನದಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಗ್ರಂಥಾಲಯದಲ್ಲಿ ಗ್ರಂಥಗಳ ಜೊತೆಗೆ ದಿನಪತ್ರಿಕೆಗಳ ಓದುವಿಕೆಗೂ ಆದ್ಯತೆ ನೀಡಬೇಕು ಎಂದರು.
ಮತ್ತೋರ್ವ ಮುಖ್ಯ ಅತಿಥಿ ಶ್ರೀ ವಿಘ್ನೇಶ್ವರ ಪ್ರೌಢಶಾಲಾ ಹಿರಿಯ ಶಿಕ್ಷಕ ಕೆ.ಪಿ. ಜಯಕುಮಾರ್ ಮಾತನಾಡಿ, ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದುವ ಮಕ್ಕಳು ಮಸ್ತಕದಲ್ಲಿ ಸಂಪನ್ನರಾಗುತ್ತಾರೆ. ಗ್ರಂಥಗಳ ಅಧ್ಯಯನ ಉನ್ನತ ವ್ಯಕ್ತಿತ್ವವನ್ನು ಮೂಡಿಸುತ್ತದೆ. ಸರ್ಕಾರದ ಕಾರ್ಯಕ್ರಮಗಳು ಗ್ರಂಥಾಲಯದಲ್ಲಿ ನಡೆದು ಜನತೆಗೆ ತಲುಪಬೇಕು ಎಂದರು.
ಕಸಾಪ ಶನಿವಾರಸಂತೆ ಹೋಬಳಿ ಅಧ್ಯಕ್ಷ ಬಿ.ಬಿ. ನಾಗರಾಜ್, ಗ್ರಂಥಾಲಯ ಸಲಹಾ ಸಮಿತಿ ನಿರ್ದೇಶಕಿ ಎಸ್.ಪಿ. ಭಾಗ್ಯಾ, ಶ್ರೀ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲಾ ಮುಖ್ಯಶಿಕ್ಷಕಿ ಸುಚಿತ್ರಾ ಮಾತನಾಡಿ, ಗ್ರಂಥಾಲಯ ಮೇಲ್ವಿಚಾರಕಿ ಎಸ್.ಪಿ. ದಿವ್ಯಾ ಅವರ ಕ್ರಿಯಾಶೀಲತೆಯಿಂದ ಗ್ರಂಥಾಲಯ ತಾಲೂಕಿನಲ್ಲೇ ಮಾದರಿ ಗ್ರಂಥಾಲಯವೆನಿಸಿದೆ ಎಂದು ಶ್ಲಾಘಿಸಿದರು.
ಗ್ರಂಥಾಲಯ ಮೇಲ್ವಿಚಾರಕಿ ಎಸ್.ಪಿ. ದಿವ್ಯಾ ಪ್ರಾಸ್ತಾವಿಕ ನುಡಿಗಳನ್ನಾಡಿ, ಗ್ರಂಥಾಲಯ ಪಂಚಾಯಿತಿ ಹಾಗೂ ಎಲ್ಲರ ಸಹಕಾರದಿಂದ ಅಭಿವೃದ್ಧಿ ಹೊಂದುತ್ತಿದ್ದರೂ ಕೊರತೆಗಳಿವೆ. ವಿದ್ಯುತ್, ಫ್ಯಾನ್, ಜೆರಾಕ್ಸ್, ಪ್ರಿಂಟರ್ನ ಅಗತ್ಯವಿದ್ದು ಕೊರತೆಗಳು ಪೂರೈಕೆಯಾದಲ್ಲಿ ಗ್ರಂಥಾಲಯ ಮತ್ತಷ್ಟು ಸದಸ್ಯರನ್ನು ಆಕರ್ಷಿಸುತ್ತದೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪೂರ್ಣಿಮಾ ಕಿರಣ್, ಭವಾನಿ ಗುರು, ಪಿಡಿಓ ಆಯಿಷಾ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಭೋಜಪ್ಪ, ವಿದ್ಯಾರ್ಥಿಗಳು, ಸಿಬ್ಬಂದಿ ಭಾರತಿ, ವೀಣಾ, ಶ್ರೀದೇವಿ, ಪೂರ್ಣಿಮಾ ಹಾಗೂ ರಹೀಮಾ ಬಾನು, ಶೋಭಾವತಿ ಹಾಜರಿದ್ದರು.