ಕುಶಾಲನಗರ, ಆ. ೧೪: ಟಿಬೆಟ್‌ನಿಂದ ಚೀನಾ ತಕ್ಷಣ ಹೊರಹೋಗುವ ಮೂಲಕ ತಮ್ಮ ದೇಶಕ್ಕೆ ಸ್ವಾತಂತ್ರ‍್ಯ ನೀಡುವಂತೆ ಒತ್ತಾಯಿಸಿ ಕುಶಾಲನಗರ ಸಮೀಪದ ಬೈಲುಕುಪ್ಪೆ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ಟಿಬೆಟ್ ಚೀನಾ ಭಾಗವಲ್ಲ ಚೀನಾ ಕಮ್ಯುನಿಸ್ಟ್ ಸರ್ಕಾರದ ಮೂಲಕ ಟಿಬೆಟ್‌ನಲ್ಲಿ ಸಂಸ್ಕೃತಿ, ಭಾಷೆ ನಾಶವಾಗುತ್ತಿದೆ. ಟಿಬೆಟ್ ವಿರೋಧಿ ನೀತಿಯನ್ನು ಅನುಸರಿಸುವ ಮೂಲಕ ಮಕ್ಕಳಿಗೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಕುಶಾಲನಗರ ಸಮೀಪದ ಬೈಲುಕೊಪ್ಪೆ ಒಂದನೇ ಕ್ಯಾಂಪಿನಲ್ಲಿ ಬೃಹತ್ ರ‍್ಯಾಲಿ ನಡೆಸಿ ನಂತರ ಮೆರವಣಿಗೆ ತೆರಳಿ ಚೀನಾದ ವಿರುದ್ಧ ಘೋಷಣೆ ಕೂಗಿದರು. ಚೀನಾ ದೌರ್ಜನ್ಯ ವಿರೋಧಿಸಿ ಹಲವು ಟಿಬೆಟಿಯನ್ ಯುವಕರು ಟಿಬೆಟ್ ದೇಶದಲ್ಲಿ ಆತ್ಮಾಹುತಿ ಮಾಡಿಕೊಂಡಿದ್ದಾರೆ. ಹಲವರನ್ನು ಚೀನಾ ಬಂಧಿಸಿದ್ದು ತಕ್ಷಣ ಅವರ ಬಿಡುಗಡೆ ಮಾಡಬೇಕು ಭಾಷೆ ಮತ್ತು ಸಂಸ್ಕೃತಿ ಸಂಪೂರ್ಣ ನಾಶವಾಗುತ್ತಿದೆ ಅಭಿವೃದ್ಧಿ ಹೆಸರಿನಲ್ಲಿ ಸಂಸ್ಕೃತಿಯ ಸಂಹಾರ ನಡೆಯುತ್ತಿದೆ. ಬೌದ್ಧ ಮಂದಿರಗಳ ಧ್ವಂಸ ಕಾರ್ಯ ಮುಂದುವರಿದಿದೆ ಮಕ್ಕಳಿಗೆ ಟಿಬೆಟ್ ಭಾಷೆ ಬದಲು ಚೈನಾ ಭಾಷೆಯನ್ನು ಕಡ್ಡಾಯ ಎಂದು ಒತ್ತಡದಿಂದ ಹೇರುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಟಿಬೆಟ್ ಸ್ವತಂತ್ರ ಆಗಲೇಬೇಕು. ಚೀನಾ ತಕ್ಷಣ ಟಿಬೆಟ್ ದೇಶ ಬಿಟ್ಟು ಹೊರ ಹೋಗಬೇಕು ಎಂದು ಘೋಷಣೆ ಕೂಗಿದರು. ನೂರಾರು ಸಂಖ್ಯೆಯ ಬೌದ್ದ ಭಿಕ್ಷುಗಳು ಟಿಬೆಟಿಯನ್ ನಾಗರಿಕರು ಟಿಬೆಟ್ ಧಾರ್ಮಿಕ ಗುರುಗಳಾದ ೧೪ನೇ ದಲೈಲಾಮ ಅವರ ಭಾವಚಿತ್ರದೊಂದಿಗೆ ಟಿಬೆಟ್ ದೇಶದ ಧ್ವಜವನ್ನು ಹಿಡಿದು ಚೀನಾದ ವಿರುದ್ಧ ಘೋಷಣೆ ಕೂಗುತ್ತಾ ಶಿಬಿರದಿಂದ ಮುಖ್ಯ ರಸ್ತೆಯಲ್ಲಿ ತೆರಳಿ ಮೆರವಣಿಗೆ ಸಾಗಿದರು.