ಸೋಮವಾರಪೇಟೆ, ಆ. ೧೩: ಗದ್ದೆಗಳನ್ನು ವಾಣಿಜ್ಯ ಬಳಕೆಗೆ ಪರಿವರ್ತಿಸದೆ, ಮುಂದಿನ ಪೀಳಿಗೆಗೆ ಆಹಾರದ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಭತ್ತ ಬೆಳೆಯುವ ಪರಂಪರೆ ಯನ್ನು ಉಳಿಸಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು.

ರೋಟರಿ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್ ಹಾಗೂ ಜೇನಿಗರಕೊಪ್ಪ ಗ್ರಾಮಸ್ಥರ ಸಹಕಾರದಲ್ಲಿ ‘ನೇಗಿಲ ಯೋಗಿ ರೈತ ನಮ್ಮ ದೇಶದ ಬೆನ್ನೆಲುಬು’ ಎಂಬ ಆಶಯದೊಂದಿಗೆ ಆಯೋಜಿಸಿದ್ದ ‘ಗದ್ದೆ ನಾಟಿ-ಕೃಷಿ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಣ್ಣಿನ ಮಗನ ಬೆವರಿನ ಹನಿಯು ದೇಶದ ಸಂಪತ್ತಿನ ಗಣಿಯಾಗಿದೆ ಎಂದು ಬಣ್ಣಿಸಿದ ಶಾಸಕರು, ರೈತರಿಗೆ ಸರ್ಕಾರದಿಂದ ಲಭಿಸುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ತಾವು ಬದ್ಧರಾಗಿದ್ದು, ಯುವ ಸಮುದಾಯ ಕೃಷಿಯತ್ತಲೂ ತೊಡಗಿಸಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಬಿ.ಎಸ್. ಸುಂದರ್, ಕಾರ್ಯದರ್ಶಿ ಪಿ.ಕೆ. ರವಿ, ಜೇನಿಗರಕೊಪ್ಪ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಜೆ.ಕೆ ಪೊನ್ನಪ್ಪ, ಕಾರ್ಯದರ್ಶಿ ಹರೀಶ್ ಇದ್ದರು.

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಟರಿ ಸದಸ್ಯರು, ಮಹಿಳೆಯರು ಹಾಗೂ ಮಕ್ಕಳು ಪಾಲ್ಗೊಂಡು ಉತ್ಸಾಹದಿಂದ ಗದ್ದೆ ನಾಟಿ ಮಾಡಿದರು.