ಗುಡ್ಡೆಹೊಸೂರು, ಆ. ೧೩: ಕೊಡಗಿನ ಪ್ರಮುಖ ಎರಡು ಜಲಾಶಯಗಳ ಪೈಕಿ ಹಾರಂಗಿ ಬಿಟ್ಟರೆ ಮತ್ತೊಂದು ಚಿಕ್ಲಿಹೊಳೆ ಜಲಾಶಯ. ಈ ಜಲಾಶಯವು ೧೯೮೦-೮೨ರಲ್ಲಿ ಭತ್ತ ಬೆಳೆಯಲು ನೀರು ಒದಗಿಸಲು ನಿರ್ಮಿಸಲಾಗಿದ್ದರೂ ಮೂಲ ಉದ್ದೇಶ ಮಾತ್ರ ಇಂದಿಗೂ ಈಡೇರಲಿಲ್ಲ.

ಜಲಾಶಯದ ಹಳೆಯ ಎಡದಂಡೆ ನಾಲೆಯು ನಂಜರಾಯಪಟ್ಟಣ ವ್ಯಾಪ್ತಿಗೆ ಒಳಪಟ್ಟರೆ. ಬಲದಂಡೆಯ ಹಳೆಯ ನಾಲೆಯ ಜೊತೆಯಲ್ಲಿ ಸುಮಾರು ೨೨ ಕಿ.ಮೀ. ಹೊಸ ನಾಲೆ ನಿರ್ಮಾಣ ಮಾಡಲಾಗಿದೆ. ರೈತರ ಗದ್ದೆಗಳಿಗೆ ಭತ್ತ ಬೆಳೆಯಲು ನೀರು ಒದಗಿಸುವದೇ ಇದರ ಮೂಲ ಉದ್ದೇಶ. ಆದರೆ ಇದೀಗ ನೀರಿನ ಸಮಸ್ಯೆಯಿಂದಾಗಿ ಜಲಾಶಯ ವ್ಯಾಪ್ತಿಗೆ ಬರುವ ನೂರಾರು ಎಕರೆ ಗದ್ದೆ ಪ್ರದೇಶ ಪಾಳುಬಿದ್ದಿವೆ. ಇದರೊಂದಿಗೆ ಆನೆ ಹಾವಳಿ, ಗದ್ದೆ ನಾಟಿ ಕಾರ್ಯಕ್ಕೆ ಜನರ ಸಮಸ್ಯೆ, ಅಧಿಕ ಸಂಬಳ ಮುಂತಾದ ಕಾರಣಗಳಿಂದಾಗಿ ಗದ್ದೆ ನಾಟಿ ಮಾಡುವವರ ಸಂಖ್ಯೆ ವಿರಳವಾಗಿದೆ. ಕೆಲವು ರೈತರು ತಮ್ಮ ಗದ್ದೆಗಳಲ್ಲಿ ಪರ್ಯಾಯ ಬೆಳೆ, ಕಾಫಿ ತೋಟಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಬಹುತೇಕ ಗದ್ದೆಗಳು ವಸತಿ ಪ್ರದೇಶಗಳಾಗಿ ಮಾರ್ಪಟ್ಟಿವೆ. ಆದರೂ ಕೆಲವು ಗ್ರಾಮಗಳಲ್ಲಿ ಈ ಎಲ್ಲಾ ಸಂಕಷ್ಟದ ನಡುವೆಯೂ ಗದ್ದೆ ನಾಟಿ ಮಾಡುವ ಕಾರ್ಯ ಮುಂದುವರಿಸಿದ್ದಾರೆ.

ಕಾಡು ಕೂಡಿರುವ ನಾಲೆ..!

ವರ್ಷಂಪ್ರತಿ ಜೂನ್ ಕೊನೆಯ ವಾರದಲ್ಲಿ ಭತ್ತದ ಸಸಿಮಡಿ ತಯಾರಿಸಲು ನೀರು ಬಿಡುವುದು ವಾಡಿಕೆಯಾಗಿದೆ. ಆದರೆ ಇದೀಗ ಆಗಸ್ಟ್ ತಿಂಗಳಾದರೂ ನಾಲೆಗಳಿಗೆ ನೀರು ಬಿಟ್ಟಿಲ್ಲ. ರೈತರ ಜಮೀನಿಗೆ ನೀರು ಹರಿಸಲು ನಿರ್ಮಾಣಗೊಂಡ ಕಾಲುವೆಗಳಲ್ಲಿ ಕಾಡು ಕೂಡಿಕೊಂಡು ಅರಣ್ಯ ಪ್ರದೇಶದಂತಾಗಿದೆ. ಈ ಭಾಗದ ನಾಲೆಯನ್ನು ನೋಡಿದರೆ ನಾಲೆಯೊಳಗೆ ಕಾಡು ಅಥವಾ ಕಾಡಿನ ಒಳಗೆ ನಾಲೆಯೋ ಎಂಬAತಾಗಿದೆ. ಪ್ರತಿ ವರ್ಷ ಯಂತ್ರಗಳನ್ನು ಬಳಸಿ ಕಾಡು ಕಡಿದು ದುರಸ್ತಿ ಪಡಿಸಲಾಗುತ್ತಿತ್ತು. ಆದರೆ ಈ ಬಾರಿ ನಾಲೆಯ ಯಾವುದೇ ಕಾಮಗಾರಿ ನಡೆದಿಲ್ಲ. ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಇತ್ತ ಗಮನಹರಿಸುವಂತೆ ಈ ಭಾಗದ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ರೈತರಿಗೆ ಪ್ರಯೋಜನವಿಲ್ಲ..!

ಈ ಬಾರಿ ಮಳೆ ಕಡಿಮೆಯಾದರೂ ಜಲಾಶಯದಲ್ಲಿ ನೀರಿನ ಮಟ್ಟ ಅಧಿಕವಾಗಿದೆ. ಹೆಚ್ಚುವರಿ ನೀರು ಜಲಾಶಯದಿಂದ ಹೊರ ಹೋಗುತ್ತಿದೆ. ಆದರೆ ರೈತರ ನಾಲೆಗಳಿಗೆ ನೀರು ಹರಿಸಿಲ್ಲ. ಕೆಲವು ರೈತರು ತಮ್ಮ ಕೊಳವೆ ಬಾವಿಯ ನೀರನ್ನು ಉಪಯೋಗಿಸಿ ಗದ್ದೆಗಳಲ್ಲಿ ಭತ್ತದ ಸಸಿ ಮಡಿಗಳನ್ನು ತಯಾರಿಸಿಕೊಂಡಿದ್ದಾರೆ. ನೀರನ್ನು ನದಿಗಳಿಗೆ ಬಿಟ್ಟರೆ ಅದು ತಲುಪುವುದು ತಮಿಳುನಾಡಿಗೆ. ನಮ್ಮ ರೈತರಿಗೆ ಇದರಿಂದ ಪ್ರಯೋಜನ ಇಲ್ಲ. ಭತ್ತದ ಸಸಿ ಮಡಿ ತಯಾರಾಗಿ ಸುಮಾರು ೨೫ ದಿನಗಳಲ್ಲಿ ನಾಟಿ ಕಾರ್ಯ ಮಾಡಬೇಕಾಗಿದೆ. ಈ ಭಾಗದ ಹಲವು ರೈತರು ಜಲಾಶಯದ ನೀರನ್ನೇ ನಂಬಿಕೊAಡಿದ್ದು., ಸರಿಯಾದ ಸಮಯಕ್ಕೆ ನಾಟಿ ಮಾಡಲು ಪರಿತಪಿಸುವಂತಾಗಿದೆ. ಕೊಡಗಿನಲ್ಲಿರುವ ಈ ಎರಡು ಜಲಾಶಯದಿಂದ ಕೊಡಗಿನ ಜನರಿಗೆ ಎಷ್ಟು ಲಾಭವಿದೆ ಎಂದು ಅವಲೋಕನ ಮಾಡುವಂತಾಗಿದೆ.

ತಮಿಳುನಾಡು-ಬೆಂಗಳೂರಿಗೆ ಲಾಭ..!

ಮಳೆ ಬಂದು ಜಲಾಶಯ ತುಂಬಿ ಹಾರಂಗಿ ಮೂಲಕ ಕೆಆರ್‌ಎಸ್ ತಲುಪಿ ತಮಿಳುನಾಡು ಮೆಟ್ಟೂರು ಜಲಾಶಯಕ್ಕೆ ನೀರು ಹರಿಯುತ್ತದೆ. ಆದರೆ ಪುರಾತನ ಕಾಲದಿಂದಲೂ ತಮ್ಮ ಗದ್ದೆಗಳಲ್ಲಿ ಭತ್ತ ವ್ಯವಸಾಯ ಮಾಡುವ ರೈತರ ಭೂಮಿಗೆ ನೀರಿಲ್ಲ. ಬೇಸಿಗೆ ಬಂತೆAದರೆ ಕುಶಾಲನಗರದ ಸುತ್ತಮುತ್ತ ಕುಡಿಯುವ ನೀರಿಗೆ ಸಮಸ್ಯೆ. ಆದರೆ ಬೆಂಗಳೂರಿನ ಪ್ರತಿ ಮನೆಗೂ ಕಾವೇರಿ ನೀರು ಸರಬರಾಜು ಇದೆಂಥ ವಿಪರ್ಯಾಸ ಎಂದು ರೈತರು ಪ್ರಶ್ನಿಸುವಂತಾಗಿದೆ. ಹಾರಂಗಿ, ಚಿಕ್ಲಿಹೊಳೆ ತುಂಬಿದರೆ ಕೆಆರ್‌ಎಸ್ ಭರ್ತಿ ಆಗುತ್ತದೆ. ಆದರೆ ಈ ಜಲಾಶಯದ ನೀರನ್ನೇ ನಂಬಿಕೊAಡಿರುವ ರೈತರ ಗದ್ದೆಗಳಿಗೆ ಮಾತ್ರ ನೀರಿಲ್ಲ. ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ರೈತರ ಜಮೀನುಗಳಿಗೆ ನೀರು ಹರಿಸಲು ಸಹಕರಿಸುವಂತೆ ಈ ಭಾಗದ ರೈತರು ಕೋರಿಕೊಂಡಿದ್ದಾರೆ.

ಪರಿಹಾರ ನೀಡಿಲ್ಲ.!

ಚಿಕ್ಲಿಹೊಳೆ ಜಲಾಶಯವು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ರಂಗಸಮುದ್ರ ಗ್ರಾಮಕ್ಕೆ ಹೊಂದಿಕೊAಡಿದೆ. ಈ ನಾಲೆಯ ಬಲದಂಡೆಯ ಹೊಸ ನಾಲೆ ಕುಶಾಲನಗರದ ಸುಂದರನಗರ ಗ್ರಾಮದವರೆಗೆ ಇದೆ. ಆದರೆ ೧೫ ಕಿಲೋಮೀಟರ್ ತನಕ ಮಾತ್ರ ಗದ್ದೆ ವ್ಯಾಪ್ತಿ ಇದ್ದು, ಉಳಿದ ಭಾಗದಲ್ಲಿ ಈ ಜಲಾಶಯದ ನೀರಿನ ಅವಶ್ಯಕತೆ ಇಲ್ಲ. ಹಾಗಾಗಿ ನಾಲೆಗಾಗಿ ಬಳಸಿಕೊಂಡ ತಮ್ಮ ಜಾಗವನ್ನು ಆ ಭಾಗದ ರೈತರು ಮರಳಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಒಳ್ಳೆಯ ಉದ್ದೇಶದಿಂದ ನಿರ್ಮಾಣವಾದ ಈ ಜಲಾಶಯ ಈಗ ವಿವಾದಕ್ಕೆ ಕಾರಣವಾಗಿದೆ. ಈ ನಾಲೆಯ ವ್ಯಾಪ್ತಿಯ ಜಾಗ ಕಳೆದುಕೊಂಡ ರೈತರಿಗೆ ಸರಿಯಾದ ಪರಿಹಾರವನ್ನು ಇದುವರೆಗೆ ಸರ್ಕಾರ ನೀಡಲಿಲ್ಲ. ಈ ಸಂಬAಧ ಜಮೀನು ಕಳೆದುಕೊಂಡ ಸುಂದರ ನಗರ ವ್ಯಾಪ್ತಿಯ ಎಂ.ಡಿ. ಕೃಷ್ಣಪ್ಪ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

- ಕುಡೆಕಲ್ ಗಣೇಶ್.