ವೀರಾಜಪೇಟೆ, ಆ. ೧೩: ಆಹಾರ ಅರಸಿಕೊಂಡು ನಗರಕ್ಕೆ ಬಂದ ಚುಕ್ಕೆ ಜಿಂಕೆಯೊAದನ್ನು ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.
ವೀರಾಜಪೇಟೆ-ಗೋಣಿಕೊಪ್ಪ ಮುಖ್ಯ ರಸ್ತೆಯ ಸಿರಿನಿಟಿ ಹಾಲ್ ಹಿಂಭಾಗದಲ್ಲಿರುವ ಕಟ್ಟಡಗಳ ನಡುವೆ ಗುರುವಾರ ಬೆಳಿಗ್ಗಿನ ಜಾವ ಚುಕ್ಕೆ ಜಿಂಕೆ ಪ್ರತ್ಯಕ್ಷವಾಗಿತ್ತು. ಮಾಕುಟ್ಟ ಅಭಯಾರಣ್ಯದಿಂದ ಆಹಾರ ಅರಸಿಕೊಂಡು ನಗರ ಪ್ರದೇಶಕ್ಕೆ ಬಂದಿದ್ದ ಜಿಂಕೆ ಕಟ್ಟಡಗಳ ನಡುವೆ ಸಿಲುಕಿಕೊಂಡು ಹೊರಬರಲಾಗದೆ ಪರದಾಡುತ್ತಿತ್ತು.
ಇದನ್ನು ಗಮನಿಸಿದ ಕಟ್ಟಡದ ಕಾವಲುಗಾರ ತಕ್ಷಣ ವೀರಾಜಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಯಾವುದೇ ಗಾಯಗಳಾಗದಂತೆ ಜಿಂಕೆಯನ್ನು ಸುರಕ್ಷಿತವಾಗಿ ಸೆರೆಹಿಡಿದರು. ಬಳಿಕ ಜಿಂಕೆಯನ್ನು ಮಾಕುಟ್ಟದ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಡಲಾಯಿತು.
ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನುತಾ ಚೌಹಾಣ್ ಹಾಗೂ ವೀರಾಜಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಹಸೀನ್ ಭಾನು ದಾವಡಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಶಿವರಾಮ್ ಕೆ.ವಿ. ಅವರ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ರಾಘವ ಪಿ.ಜೆ., ಶ್ರೀನಿವಾಸ್, ಲೋಕೇಶ್, ಗಸ್ತು ಅರಣ್ಯಪಾಲಕ ನಂದೀಶ ಎ.ಎಸ್., ಆರ್ಆರ್ಟಿ ಹಾಗೂ ಆನೆ ಕಾರ್ಯಪಡೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.