ಪೊನ್ನಂಪೇಟೆ, ಆ. ೧೩: ಆತ್ಮ ಯೋಜನೆಯಡಿ ಕೊಡಗು ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ವೀರಾಜಪೇಟೆ ತಾಲೂಕು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ಭತ್ತದ ಕೃಷಿ ಉತ್ತೇಜನಕ್ಕಾಗಿ ನಾಟಿ ನೆಡುವ ಕಾರ್ಯಕ್ರಮ ನಲ್ಲೂರು ಗ್ರಾಮದಲ್ಲಿ ನಡೆಯಿತು.

ನಲ್ಲೂರು ಗ್ರಾಮದ ರೈತ ಮುಖಂಡ ಚೆಟ್ರುಮಾಡ ಸುಜಯ್ ಬೋಪಯ್ಯ ಅವರ ಗದ್ದೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಕಾಯಕ ರೈತ ಕಾರ್ಮಿಕರು, ಕೃಷಿ ಇಲಾಖೆ ಅಧಿಕಾರಿಗಳು, ವಿಜ್ಞಾನಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡು ನಾಟಿ ಮಾಡಿದರು.

ಭತ್ತದ ಕೃಷಿಯ ಮಹತ್ವವನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಪರಿಚಯಿಸುವುದು ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹುದೂರಿನ ಪ್ರಗತಿಪರ ರೈತ ರವಿಶಂಕರ್ ಭಾಗವಹಿಸಿದ್ದರು. ಮೊದಲಿಗೆ ಗಣ್ಯರು ಭತ್ತದ ಸಸಿಮಡಿಗೆ ನೀರು ಎರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಹೋರಾಟದಿಂದ ಮಾತ್ರ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ. ಕೃಷಿ ಇಲಾಖೆಯ ಅಧಿಕಾರಿಗಳು ಸರಕಾರಕ್ಕೆ ವರದಿಗಳನ್ನು ಕೊಡುವಾಗ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ವರದಿಗಳನ್ನು ಸಿದ್ಧಪಡಿಸಿ ರೈತರಿಗೆ ಪ್ರೋತ್ಸಾಹ ಧನ ಸಿಗುವಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು. ಶಾಲಾ ಮಕ್ಕಳು ತಮ್ಮ ಕಲಿಕೆಯ ಜೊತೆಗೆ ಕೃಷಿ ಕಾಯಕದ ಬಗ್ಗೆ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಕೃಷಿ ಸಂರಕ್ಷಣಾ ವಿಜ್ಞಾನಿ ವೀರೇಂದ್ರ ಕುಮಾರ್ ಕೆ.ವಿ. ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರಲ್ಲಿ ಭತ್ತದ ಬೆಳೆಗಳ ಬಗ್ಗೆ ಆಸಕ್ತಿ ಕಡಿಮೆಯಾಗಿ ವಾಣಿಜ್ಯ ಬೆಳೆಗಳತ್ತ ಹೆಚ್ಚು ಆಸಕ್ತಿ ತೋರುತ್ತಿರುವ ಸಂದರ್ಭದಲ್ಲಿ ರೈತ ಸಂಘದವರು ಇಂತಹ ಭತ್ತದ ನಾಟಿ ಕಾರ್ಯಕ್ರಮ ಮಾಡಿರುವುದು ರೈತರಿಗೆ ಹೆಚ್ಚು ಪ್ರೇರಣೆ ನೀಡಿದಂತಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.

ಗೋಣಿಕೊಪ್ಪಲು ಕೆವಿಕೆ ಮುಖ್ಯಸ್ಥ ಡಾ. ಮುರುಳಿಧರನ್ ಬಿ.ಎಂ.ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೊರಗಿನಿಂದ ಬರುವ ಅಕ್ಕಿಯಲ್ಲಿ ರಾಸಾಯನಿಕಗಳು ಹೆಚ್ಚಿರುವ ಕಾರಣ, ಸ್ಥಳೀಯವಾಗಿ ಭತ್ತ ಕೃಷಿ ಮಾಡಿದರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು. ಪೊನ್ನಂಪೇಟೆ ಅರಣ್ಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಆರ್.ಎನ್. ಕೆಂಚಾರೆಡ್ಡಿ ಮಾತನಾಡಿ, ಕೊಡಗಿನ ಭತ್ತ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಹೆಚ್ಚು ಸಾವಯವದಿಂದ ಕೂಡಿರುವುದರಿಂದ ಇದಕ್ಕೆ ಹೆಚ್ಚಿನ ಮಹತ್ವ ಇದೆ ಎಂದು ಹೇಳಿದರು.

ಪೊನ್ನಂಪೇಟೆ ಕೃಷಿ ಇಲಾಖೆ ಅಧಿಕಾರಿ ಮೀರಾ ರೈತ ಸಂಪರ್ಕ ಕೇಂದ್ರದಿAದ ದೊರೆಯುವ ಸೌಲಭ್ಯಗಳ ಮಾಹಿತಿಯನ್ನು ರೈತರಿಗೆ ನೀಡಿದರು. ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ಪ್ರಗತಿಪರ ರೈತರಾದ ಚೆಟ್ರುಮಾಡ ಸುಜಯ್ ಬೋಪಯ್ಯ, ಮಲಚೀರ ಉತ್ತಪ್ಪ, ಕೊಕ್ಕಲೆಮಾಡ ದಾದ, ಪೋರಂಗಡ ಪವನ್, ಪಿ.ಎನ್. ಸುಂದರ ಹಾಗೂ ಒಕ್ಕಲಿಗರ ಅರುಣ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ರೈತ ಸಂಘದ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಮಾಯಮುಡಿ ಗ್ರಾಮದ ರೈತ ಸಂಘದ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ಅಮ್ಮತ್ತಿ ಹೋಬಳಿ ರೈತ ಸಂಘದ ಅಧ್ಯಕ್ಷ ಅಜಿತ್, ಕೊಡಗು ಜಿಲ್ಲಾ ಕೃಷಿ ಉಪ ನಿರ್ದೇಶಕ ಡಾ. ಸೋಮಶೇಖರ್, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ. ಸಿ.ಜೆ. ಕುಶಾಲಪ್ಪ, ಕೃಷಿ ಅಧಿಕಾರಿಗಳು, ರೈತ ಸಂಘದ ಸದಸ್ಯರು, ಮಾಯಮುಡಿ, ಕಿರುಗೂರು ಶಾಲೆಯ ಶಿಕ್ಷಕರರು, ವಿದ್ಯಾರ್ಥಿಗಳು, ಪ್ರಗತಿ ಪರ ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.