ಬೆಂಗಳೂರು, ಆ. ೧೨: ರಾಜ್ಯ ರಾಜಕೀಯದಲ್ಲಿನ ದಿಢೀರ್ ಬೆಳವಣಿಗೆಯೊಂದರಲ್ಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ಕೊಡಗಿನ ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರನ್ನು ನೇಮಿಸಲಾಗಿದೆ.
ಈ ಕುರಿತಾಗಿ ರಾಜ್ಯ ಶಿಷ್ಟಾಚಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರಕಾರದ ವಿಶೇಷ ಕಾರ್ಯದರ್ಶಿ ವೀರಭದ್ರ ಹಂಚಿನಾಳ ಅವರು ಇಂದು ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.
ಆದೇಶದಲ್ಲಿನ ಮಾಹಿತಿ ಹೀಗಿದೆ “ಶಾಸಕ ಪೊನ್ನಣ್ಣ ಅವರನ್ನು ತಕ್ಷಣ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಅಲ್ಲದೆ, ಅವರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನವನ್ನು ನೀಡಲಾಗಿದೆ”. ಇತ್ತೀಚೆಗೆ ಸಚಿವ ಸಂಪುಟ ವಿಸ್ತರಣೆ ಸಂದರ್ಭ ಕೊಡಗು ಜಿಲ್ಲೆಗೆ ಸಚಿವ ಸ್ಥಾನ ನೀಡಿರಲಿಲ್ಲ. ಪೊನ್ನಣ್ಣ ಅವರಿಗೆ ಬಹುತೇಕ ಸಚಿವ ಸ್ಥಾನ ದೊರಕಬಹುದು ಎಂಬ ವಿಶ್ವಾಸವಿದ್ದುದು ಹುಸಿಯಾಗಿ ಅವರಿಗೆ ವಿಧಾನ ಸಭಾ ಉಪಸಭಾಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ಈ ಬಗ್ಗೆ ಆ ಸಂದರ್ಭ “ಶಕ್ತಿ” ಅವರ ಅಭಿಪ್ರಾಯ ಬಯಸಿದ್ದಾಗ ಆ ಸ್ಥಾನದ ಬಗ್ಗೆ ಅವರಲ್ಲಿ ಅಷ್ಟಾಗಿ ಒಲವಿಲ್ಲದಿದ್ದುದು ಸ್ಪಷ್ಟಗೊಂಡಿತ್ತು. ಅಲ್ಲದೆ, ಕೊಡಗಿನ ರಾಜಕೀಯ ವಲಯದಲ್ಲಿಯೂ ನಿರಾಶೆ ಮೂಡಿತ್ತು. ಆದರೆ, ಇದೀಗ ಬದಲಾದ ವಿದ್ಯಮಾನದಲ್ಲಿ ಪೊನ್ನಣ್ಣ ಅವರಿಗೆ ಸಂಪುಟ ದರ್ಜೆ ಸಚಿವರ ಸ್ಥಾನ ಸಹಿತ ಮುಖ್ಯಮಂತ್ರಿಯವರ ಕಾರ್ಯದರ್ಶಿ ಸ್ಥಾನ ನೀಡಿರುವುದು ಅವರ ಅಭಿಮಾನಿಗಳ ವಲಯದಲ್ಲಿ ಹುರುಪು ಮೂಡಿಸಿದೆ. ಈ ಕುರಿತಾಗಿ “ಶಕ್ತಿ” ಪೊನ್ನಣ್ಣ ಅವರನ್ನು ಇಂದು ಸಂಪರ್ಕಿಸಿದಾಗ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಹೊಸ ಸ್ಥಾನದ ಕುರಿತು ಅವರು ಆಸಕ್ತಿ ವ್ಯಕ್ತಪಡಿಸಿರುವುದು ಸ್ಪಷ್ಟಗೊಂಡಿತು. ವಿಧಾನಸಭಾ ಉಪಸಭಾಧ್ಯಕ್ಷ ಸ್ಥಾನದ ಬದಲು ಇದು ತನ್ನ ಆಯ್ಕೆಯಾಗಿದೆ ಎಂಬುದನ್ನು ಅವರು ಖಚಿತಗೊಳಿಸಿದರು. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಕಾನೂನು ಸಲಹೆಗಾರರಾಗಿ ಸಂಪುಟ ದರ್ಜೆ ಸಚಿವ ಸ್ಥಾನ ಹೊಂದಿದ್ದು ಸುಮಾರು ೩ ವರ್ಷಗಳ ಅನುಭವ ಹೊಂದಿರುವ ಪೊನ್ನಣ್ಣ ಅವರು ಇದೀಗ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ಜವಾಬ್ದಾರಿಕೆ ವಹಿಸಿಕೊಂಡಿರುವುದು ವಿಶೇಷ ಬೆಳವಣಿಗೆಯಾಗಿದೆ ಎನ್ನುವ ಅಭಿಪ್ರಾಯ ಕೇಳಿಬಂದಿದೆ.
ಸಂತಸ ತಂದಿದೆ - ಮುಂದೆ ಸಚಿವ ಸ್ಥಾನದ ನಿರೀಕ್ಷೆಯಿದೆ
ಶಾಸಕ ಪೊನ್ನಣ್ಣ ಅವರು “ಶಕ್ತಿ” ಯೊಂದಿಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊAಡರು. ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿರುವುದು ನನಗೆ ಸಂತಸ ತಂದಿದೆ.
ಪಕ್ಷದ ವರಿಷ್ಠರು, ಮಾಜಿ ಮುಖ್ಯಮಂತ್ರಿ ಹಾಗೂ ಈಗಿನ ಮುಖ್ಯಮಂತ್ರಿಯವರು ನನ್ನನ್ನು ಸಚಿವನಾಗಿ ಮಾಡುವ ಪ್ರಯತ್ನ ಮಾಡಿದರು. ಆದರೆ, ಮಂತ್ರಿಮAಡಲ ರಚನೆ ಸಂದರ್ಭ ಅನೇಕ ವಿಚಾರಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಅದರಿಂದಾಗಿ ನಮ್ಮೆಲ್ಲರ ನಿರೀಕ್ಷೆಯಂತೆ ಅದು ಈಡೇರಲಿಲ್ಲ. ಆದರೆೆ, ಅದೇ ಪಟ್ಟಿಯಲ್ಲಿ ನನ್ನನ್ನು ಉಪಸಭಾಧ್ಯಕ್ಷನಾಗಿ ಆಯ್ಕೆ ಮಾಡಿ ಹೆಸರು ಸೂಚಿಸಿದರು. ಬಳಿಕ ಸಕ್ರಿಯವಾಗಿ ನಾನು ರಾಜಕೀಯದಲ್ಲಿರಬೇಕು, ಸದನ ಮೊದಲಾದ ಕಡೆ ರಾಜಕೀಯವಾಗಿ ಮುಖ್ಯಮಂತ್ರಿಯವರು ಮಾತನಾಡಲು ಪೂರಕವಾಗಿರುವ ಸಲುವಾಗಿ ಎಲ್ಲರೂ ಸೇರಿ ನನ್ನನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ ಪರಿಗಣಿಸಿ ಈ ತೀರ್ಮಾನ ಕೈಗೊಂಡಿದ್ದಾರೆ. ಅದಕ್ಕೆ ಅವರಿಗೆಲ್ಲ ಧನ್ಯವಾದ ತಿಳಿಸುತ್ತೇನೆ. ನನ್ನ ಶ್ರಮ ಮತ್ತು ಪ್ರಾಮಾಣಿಕತೆಯನ್ನು ಅವರು ಗುರುತಿಸಿದ್ದಾರೆ. ಮುಂದೆ ಮಂತ್ರಿ ಮಂಡಲದಲ್ಲಿಯೂ ಅವಕಾಶ ಸಿಗುವ ವಿಶ್ವಾಸ ನನಗಿದೆ ಎಂದು ಪೊನ್ನಣ್ಣ ಅಭಿಪ್ರಾಯಪಟ್ಟರು.