ನಾಪೋಕ್ಲು, ಆ. ೧೨: ಬೆಟ್ಟಗೇರಿ ಉದಯ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ಪೋಷಕರ ಸಭೆಯನ್ನು ಕಾರುಗುಂದ ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಕೆ.ಎಸ್.ಆರ್.ಟಿ.ಸಿ. ನಿವೃತ್ತ ಉದ್ಯೋಗಿ ತಳೂರು ಕೇಶವ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. ಸಭೆಯಲ್ಲಿ ಮುಖ್ಯವಾಗಿ ಶಾಲೆಯ ಮಕ್ಕಳ ಇತ್ತೀಚಿನ ವಿದ್ಯಾಭ್ಯಾಸದ ಪ್ರಗತಿ, ಶೈಕ್ಷಣಿಕ ಗುಣಮಟ್ಟ ಹಾಗೂ ಶಾಲೆಯಲ್ಲಿ ಎದುರಾಗುತ್ತಿರುವ ಕೆಲವೊಂದು ನ್ಯೂನತೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಶಾಲೆಯ ಶೈಕ್ಷಣಿಕ ವಾತಾವರಣವನ್ನು ಸುಧಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಪೋಷಕರು ಮತ್ತು ಹಳೆಯ ವಿದ್ಯಾರ್ಥಿಗಳು ತಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊAಡರು.

ಸಭೆಯಲ್ಲಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲಾ ಹಳೆಯ ವಿದ್ಯಾರ್ಥಿಗಳನ್ನು ಒಂದೇ ಸೂರಿನಡಿ ಒಟ್ಟುಗೂಡಿಸುವ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ಹಳೆಯ ವಿದ್ಯಾರ್ಥಿಗಳ ವೇದಿಕೆಗೆ 'ಉದಯ ಹಳೆ ವಿದ್ಯಾರ್ಥಿಗಳ ಚಾರಿಟೇಬಲ್ ಟ್ರಸ್ಟ್' ಎಂದು ಹೊಸದಾಗಿ ನಾಮಕರಣ ಮಾಡಲಾಯಿತು. ಈ ವೇಳೆ ಅಧ್ಯಕ್ಷ ತಳೂರು ಕೇಶವ ಅವರು ಟ್ರಸ್ಟ್ನ ಮೂಲಕ ಶಾಲೆಯ ಶ್ರೇಯಸ್ಸಿಗೆ ಎಲ್ಲರೂ ಶ್ರಮಿಸುವಂತೆ ಕರೆ ನೀಡಿದರು.

ಇದೇ ವೇಳೆ ಶಾಲೆಯ ಮುಂದಿನ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ೨೦೨೬ನೇ ಸಾಲಿನ ನೂತನ ಮಂಡಳಿಯನ್ನು ಸರ್ವಾನುಮತದಿಂದ ರಚಿಸಲಾಯಿತು.

ಉದಯ ಹಳೆಯ ವಿದ್ಯಾರ್ಥಿಗಳ ಟ್ರಸ್ಟ್ನ ನೂತನ ಮಂಡಳಿಯ ಅಧ್ಯಕ್ಷರಾಗಿ ಬೆಳ್ಯನ ಚಂದ್ರಪ್ರಕಾಶ್ (ರವಿ), ಕಾರ್ಯದರ್ಶಿಯಾಗಿ ಶರ್ಫುದ್ದೀನ್ ಎಂ.ಹೆಚ್., ಉಪಾಧ್ಯಕ್ಷರಾಗಿ ಅರೆಯಂಡ ಸುರೇಶ್, ಸಹಕಾರ್ಯದರ್ಶಿಯಾಗಿ ಕಡ್ಯದ ಭವಾನಿ ಶಂಕರ್, ಖಜಾಂಚಿಯಾಗಿ ಮಂಜುನಾಥ್ ಬಿ.ಎನ್., ಸಲಹೆಗಾರರಾಗಿ ಹೊಸೂರು ಕೇಶವ ಗಿರೀಶ್, ಚೆರುಮಾಡಂಡ ಸತೀಶ್ ಸೋಮಣ್ಣ, ತಳೂರು ದಿನೇಶ್ ಕರುಂಬಯ್ಯ ಆಯ್ಕೆಯಾದರು.

ಮಂಡಳಿಯ ಸದಸ್ಯರುಗಳಾಗಿ ವಿ.ಟಿ. ಗಿರೀಶ್, ಚಳಿಯಂಡ ಯುತೀಶ್ ಸೋಮಯ್ಯ, ತೆನ್ನಿರ ರಮೇಶ್, ಚಂದ್ರ ಉಡೋತ್ತು, ಮಜೀದ್ ಎಂ.ಎ., ಕೊಡಗನ ತೀರ್ಥ ಪ್ರಸಾದ್, ವೇದಾವತಿ ಎಂ.ಆರ್., ಪ್ರವೀಣ್ ಎಡಿಕೇರಿ, ಜಯಪ್ರಸಾದ್ ರೈ, ಗೌರಮ್ಮ ಕೆ.ಎಂ., ಬೆಳ್ಯನ ಎನ್. ಪವಿತ್ರ ಕುಮಾರ್, ರಂಜನ್ ಎ.ಬಿ., ನೈಯ್ಯಣ್ಣಿರ ಹೇಮಾ ಕುಮಾರ್, ಪಾಣತ್ತಲೆ ಚಂದನ್, ಕೋಳುಮಾಡಂಡ ಕಿರಣ ಆಯ್ಕೆಯಾದರು.

ಮಂಡಳಿಗೆ ಹೊಸ ಸದಸ್ಯರ ಸದಸ್ಯತ್ವವನ್ನು ಪಡೆಯಲು ಮುಂದಿನ ದಿನಗಳಲ್ಲಿ ಮುಕ್ತವಾಗಿ ಅವಕಾಶ ನೀಡಲಾಗುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಪ್ರತಿ ಸದಸ್ಯರಿಗೆ ರೂ. ೫೦೦ ಸದಸ್ಯತ್ವ ಶುಲ್ಕವನ್ನು ನಿಗದಿಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಪೋಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.