ವೀರಾಜಪೇಟೆ, ಆ. ೧೨: ಮಗ್ಗುಲ ಗ್ರಾಮದಲ್ಲಿರುವ ಶ್ರೀ ಶನೇಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ಶ್ರಾವಣ ಮಾಸದ ಅಂಗವಾಗಿ ಶ್ರಾವಣ ಶನಿವಾರದ ವಿವಿಧ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಾಲಯದ ಆಡಳಿತ ಮಂಡಳಿಯ ಪ್ರಮುಖ ಚೋಕಂಡ ರಮೇಶ್ ತಿಳಿಸಿದ್ದಾರೆ. ಶ್ರಾವಣ ಮಾಸದ ಒಟ್ಟು ೪ ಶನಿವಾರಗಳಂದು ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ಹಾಗೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ನೆರವೇರಲಿವೆ. ತಾ. ೧೫ರ ೧ನೇ ಶನಿವಾರ ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮದೊಂದಿಗೆ ಶ್ರಾವಣ ಮಾಸದ ಪೂಜಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ತಾ ೨೨, ಎರಡನೇ ಶನಿವಾರ, ಆಗಸ್ಟ್ ೨೯ ೩ನೇ ಶನಿವಾರ, ಸೆಪ್ಟೆಂಬರ್ ೫ ರಂದು ೪ನೇ ಶನಿವಾರ, ಶ್ರಾವಣ ಮಾಸದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಶ್ರಾವಣ ಶನಿವಾರಗಳಂದು ದೇವಾಲಯದಲ್ಲಿ ನವಗ್ರಹ ಪೂಜೆ, ಶನಿ ಶಾಂತಿ ಪೂಜೆ, ಶನಿ ಜಪ ಹಾಗೂ ವಿವಿಧ ವಿಶೇಷ ಪೂಜೆಗಳು ಜರುಗಲಿವೆ. ಪ್ರತಿಯೊಂದು ಶನಿವಾರದಂದು ಮಧ್ಯಾಹ್ನ ೧ ಗಂಟೆಗೆ ನಾಡಿನ ಕ್ಷೇಮಕ್ಕಾಗಿ ಮಹಾಪೂಜೆ ನಡೆಯಲಿದ್ದು, ತದನಂತರ ಮಧ್ಯಾಹ್ನ ೧:೩೦ಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.