ಸುಂಟಿಕೊಪ್ಪ, ಆ. ೧೨: ತುಂಬು ಗರ್ಭಿಣಿ ಹೆಣ್ಣಾನೆಯೊಂದು ಪ್ರಸವ ವೇದನೆಯಲ್ಲಿ ಅಂದಗೋವೆಯ ಕಾಫಿ ತೋಟವೊಂದರಲ್ಲಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಗೋವೆ ಗ್ರಾಮದ ದಾಸಂಡ ಕಿರಣ್ ಅವರ ಕಾಫಿ ತೋಟಕ್ಕೆ ಆಹಾರ ಅರಸಿ ಬಂದಿದ್ದ ಕಾಡಾನೆ, ಮೂರು ದಿನಗಳ ಹಿಂದೆ ಪ್ರಸವ ವೇದನೆಯಲ್ಲಿ ಮೃತಪಟ್ಟಿರುವುದು ವರದಿಯಾಗಿದೆ. ಮಾಹಿತಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಂತ್ಯಕ್ರಿಯೆ ನೆರವೇರಿಸಿದರು.

ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯಾಧಿಕಾರಿ ಡಾ. ಮುಜೀಬ್ ಅವರ ಪ್ರಕಾರ, ಮೃತಪಟ್ಟಿರುವುದು ಸುಮಾರು ೩೦ರಿಂದ ೩೫ ವರ್ಷ ವಯಸ್ಸಿನ ಹೆಣ್ಣಾನೆಯಾಗಿದ್ದು, ಪ್ರಸವದ ವೇಳೆ ಉಂಟಾದ ಗಂಭೀರ ಸಮಸ್ಯೆಯಿಂದಾಗಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಸ್ಥಳಕ್ಕೆ ಸೋಮವಾರಪೇಟೆ ವಿಭಾಗದ ಎಸಿಎಫ್ ನವೀನ್ ಕುಮಾರ್, ಕುಶಾಲನಗರ ವಲಯ ಅರಣ್ಯಾಧಿಕಾರಿ ರಕ್ಷಿತ್, ಶಿವಕುಮಾರ್ ಹಾಗೂ ಅರಣ್ಯ ಸಿಬ್ಬಂದಿ ಮತ್ತು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡರು.