ಶನಿವಾರಸಂತೆ, ಆ. ೧೧: ಪಟ್ಟಣದ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಹದಿಹರೆಯದ ಬಾಲಕಿಯರಿಗಾಗಿ ‘ಋತುಚಕ್ರದ ಆರೋಗ್ಯ ಜಾಗೃತಿ ಮತ್ತು ಹದಿಹರೆಯದ ಬಾಲಕಿಯರು ಎದುರಿಸುವ ಸವಾಲುಗಳು’ ಎಂಬ ವಿಷಯದ ಕುರಿತು ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಬೆಂಗಳೂರಿನ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಸಹಾಯಕ ಉಪನ್ಯಾಸಕಿ ಪುಷ್ಪರಾಣಿ ಉಪನ್ಯಾಸ ನೀಡಿದರು.
ಹದಿಹರೆಯದಲ್ಲಿ ಉಂಟಾಗುವ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಬದಲಾವಣೆಗಳು, ಋತುಚಕ್ರದ ಸಂದರ್ಭದಲ್ಲಿ ಪಾಲಿಸಬೇಕಾದ ಆರೋಗ್ಯಕರ ಅಭ್ಯಾಸಗಳು, ವೈಯಕ್ತಿಕ ಸ್ವಚ್ಛತೆ, ಆತ್ಮವಿಶ್ವಾಸ, ಸುರಕ್ಷತೆ ಹಾಗೂ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವ ಅಗತ್ಯತೆಯ ಕುರಿತು ವಿದ್ಯಾರ್ಥಿನಿಯರಿಗೆ ಸಮಗ್ರ ಮಾಹಿತಿ ನೀಡಿದರು. ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸಿ ತಮ್ಮ ಸಂದೇಹಗಳಿಗೆ ಸ್ಪಷ್ಟ ಉತ್ತರಗಳನ್ನು ಪಡೆದುಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಪ್ರಾಂಶುಪಾಲ ರೆವರೆಂಡ್ ಫಾದರ್ ಜಿಬಿ ಥೋಮಸ್ ಮಾತನಾಡಿ, ಉಪನ್ಯಾಸವು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಮತ್ತು ಆತ್ಮವಿಶ್ವಾಸದಿಂದ ಎದುರಿಸುವ ಮನೋಭಾವವನ್ನು ಬೆಳೆಸುವಲ್ಲಿ ಸಹಕಾರಿಯಾಯಿತು ಎಂದರು. ಶಾಲಾ ಆಡಳಿತಾಧಿಕಾರಿ ಶಿಬಿನ್, ಉಪನ್ಯಾಸಕರು, ಶಿಕ್ಷಕರು ಹಾಜರಿದ್ದರು.