ಇದೊಂದು ಪವಿತ್ರ ವಾದ ಹಬ್ಬ. ಭೀಮನ ಅಮವಾಸೆ ಯನ್ನು ಕರ್ನಾಟಕದಲ್ಲಿ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಆಚರಿಸುತ್ತಾರೆ. ಆಷಾಢ ಬಹುಳ ಅಮಾವಾಸ್ಯೆಗೆ ಭೀಮನ ಅಮಾವಾಸ್ಯೆಯೆನ್ನುವರು. ಮೃತನಾದ ಗಂಡನನ್ನು ಸತೀ ಶಿರೋಮಣಿಯೊಬ್ಬಳು ಪಾರ್ವತಿ-ಪರಮೇಶ್ವರರ ಅನುಗ್ರಹದಿಂದ ಬದುಕಿಸಿ ದೀರ್ಘ ಸುಮಂಗಲಿತನ ಪಡೆದ ದಿನ ಇದು. ಇದಕ್ಕೆ ಪತಿ ಸಂಜೀವಿನಿ ವ್ರತ ಎಂಬ ಹೆಸರೂ ಇದೆ.

ಈ ಹಬ್ಬಕ್ಕಿರುವ ಹೆಸರುಗಳು: ಜ್ಯೋತಿ ಬೀಮೇಶ್ವರ ವ್ರತ, ದೀಪ ಸ್ತಂಭ ಪೂಜೆ, ಗಂಡನ ಪೂಜೆ/ಗಂಡನ ಹಬ್ಬ, ಸತಿ ಸಂಜೀವಿನಿ ವ್ರತವೆಂದು ಆಚರಿಸಲ್ಪಡುವುದು.

ಹಬ್ಬದ ಮಹತ್ವ: ಶಿವ ಪಾರ್ವತಿಯರ ಪೂಜೆ ಈ ದಿನದ ಮಹತ್ವ. ವಿವಾಹಿತರು ಅವಿವಾಹಿತರು ಶಿವ ಪಾರ್ವತಿಯನ್ನು ಪೂಜಿಸಿ, ಕುಟುಂಬದ ಪುರುಷ ಸದಸ್ಯರ ದೀರ್ಘಾಯುಷ್ಯ, ಆರೋಗ್ಯ ಯಶಸ್ಸು ಮತ್ತು ಸಂತೋಷಕ್ಕಾಗಿ ದೇವರನ್ನು ಪ್ರಾರ್ಥಿಸುತ್ತಾರೆ. ಅವಿವಾಹಿತ ಹುಡುಗಿಯರು ಒಳ್ಳೆಯ ಪತಿ ಸಿಗಲಿ ಎಂದು ಬೇಡುತ್ತಾರೆ. ಸಹೋದರ-ಸಹೋದರಿಯರು ಈ ಬಗ್ಗೆ ಪ್ರಾರ್ಥನೆ ಮಾಡುತ್ತಾರೆ.

ಶೈವ ಸಂಪ್ರದಾಯದಲ್ಲಿ: ಕರ್ನಾಟಕದ ಶೈವ ಸಂಪ್ರದಾಯದಲ್ಲಿ ಈ ದಿನ ಶಿವನು ಪಾರ್ವತಿಯ ಭಕ್ತಿಗೆ ಮೆಚ್ಚಿ ಅವಳನ್ನು ಪತ್ನಿಯಾಗಿ ಸ್ವೀಕರಿಸಿದ ದಿನವೆಂದು ನಂಬಲಾಗುತ್ತದೆ. ಇನ್ನು ಇತರ ಮೂಲಗಳಲ್ಲಿ ಮಹಾಭಾರತದಲ್ಲಿ ಭೀಮನ ಜನ್ಮ ದಿನ ಅಥವಾ ಬಕಾಸುರನನ್ನು ಸಂಹರಿಸಿದ ದಿನವೆಂದೂ ಸಂಬAಧಿಸಲಾಗುತ್ತದೆ.

ಆಚರಣೆಯ ವಿಧಾನ: ಮಹಿಳೆಯರು ಬೆಳಿಗ್ಗೆ ಮಂಗಳ ಸ್ನಾನ ಮಾಡಿ ಉಪವಾಸ ವೃತ ಕೈಗೊಳ್ಳುತ್ತಾರೆ.

ಕಾಲಿ ಕಂಬ/ದೀಪ ಸ್ತಂಭ: ಶಿವ ಪಾರ್ವತಿಯರ ಪ್ರತಿನಿಧಿ ರೂಪವಾಗಿ ಕೆಂಮಣ್ಣಿನಿAದ ಎರಡು ದೀಪಗಳನ್ನು ತಯಾರಿಸಿ, ಬೂದಿ ಸಿಂಧೂರದಿAದ ಅದನ್ನು ಅಲಂಕರಿಸಿ ಪೂಜಿಸುತ್ತಾರೆ. ಪಂಚಲೋಹ ಅಥವಾ ಚಿತ್ರವನ್ನು ಬಳಸು ವುದೂ ಇದೆ.

ಹಳದಿ ದಾರ : ಕಂಕಣ ಅಥವಾ ನೊಂಬು ದಾರ ಕಟ್ಟುತ್ತಾರೆ.

ನೈವೇದ್ಯ : ಕರಿ ಕಡುಬು, ಹಣ್ಣು, ಹಾಲು, ತಂಬಿಟ್ಟು ಇತ್ಯಾದಿಯನ್ನು ದೇವರಿಗೆ ಅರ್ಪಿಸುತ್ತಾರೆ.

ವಿವಾಹಿತ ಮಹಿಳೆಯರು ಪತಿಯ ಪಾದ ಪೂಜೆ ಮಾಡುತ್ತಾರೆ. ಮದುವೆಯ ನಂತರದಲ್ಲಿ ಸಾಮಾನ್ಯವಾಗಿ ೯ ವರ್ಷಗಳ ಕಾಲ ಈ ವ್ರತ್ತ ಮಾಡುತ್ತಾರೆ. ಗೋಧಿ ಅಥವಾ ಅಕ್ಕಿ ಹಿಟ್ಟಿನಿಂದ ಮಾಡಿದ ಉಂಡೆಗಳಲ್ಲಿ ಕಡಬು/ನಾಣ್ಯ ಇಟ್ಟು ಸಹೋದರ ಅಥವಾ ಮನೆ ಪುರುಷರು, ಮಕ್ಕಳು ಇದನ್ನು ಒಡೆದು ನಾಣ್ಯವನ್ನು ತೆಗೆದುಕೊಂಡು ಹೋಗಿ ಆಶೀರ್ವಾದ ಪಡೆಯುತ್ತಾರೆ. ಮರು ದಿನ ಮಣ್ಣಿನ ದೀಪಗಳನ್ನು ತುಳಸಿ ಗಿಡದ ಕೆಳಗೆ ಇಡುವುದು ಅಥವಾ ನೀರಿನಲ್ಲಿ ಕರಗಿಸಿ ಸುರಿಯುವುದು ಸಾಮಾನ್ಯ ಸಂಪ್ರದಾಯ. ಇದು ಮಹಿಳೆಯರ ವ್ರತವಾಗಿದ್ದು ಕುಟುಂಬದ ಪುರುಷರ ಯೋಗ ಕ್ಷೇಮಕ್ಕಾಗಿ ಮಾಡುವ ಭಕ್ತಿಯ ಆಚರಣೆಯಾಗಿದೆ. ದ. ಕನ್ನಡದಲ್ಲಿ ಇದನ್ನು ಆಟಿ ಅಮಾವಾಸ್ಯೆ ಎಂದು ಕರೆಯುವರು.

ಅವಶ್ಯಕ ಪೂಜಾ ಸಾಮಗ್ರಿಗಳು: ಎರಡು ಮಣ್ಣಿನ ಕಾಲಿ ಕಂಬ/ದೀಪ ಸ್ತಂಭ, ಶಿವಪಾರ್ವತಿ ಚಿತ್ತ, ಬೆಳ್ಳಿ ದೀಪಗಳು ಅಕ್ಕಿ ಧಾನ್ಯರಾಶಿ, ಹಳದಿದಾರ, ತುಪ್ಪ, ಎಣ್ಣೆ ಬತ್ತಿ, ನೈವೇದ್ಯದಲ್ಲಿ ಕರಿಕಡಬು, ತಂಬಿಟ್ಟು, ಹಣ್ಣು, ಬಾಳೆ ಹಣ್ಣು, ತೆಂಗಿನಕಾಯಿ, ವೀಳ್ಯೆದೆಲೆ, ಅಡಿಕೆ ಇತ್ಯಾದಿ. ಭೀಮನ ಅಮವಾಸ್ಯೆಯನ್ನು ಮುಖ್ಯವಾಗಿ ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯ ಆರೋಗ್ಯ ಯಶಸ್ಸು ಮತ್ತು ಸಂತೋಷಕ್ಕಾಗಿ ಆಚರಿಸುತ್ತಾರೆ. ಈ ವ್ರತವು ಮಹಾಭಾರತದ ಪಾಂಡವರಲ್ಲಿ ಒಬ್ಬನಾದ ಭೀಮನ ಜನ್ಮ ದಿನವನ್ನು ಆಚರಿಸಿ, ಕುಟುಂಬದ ಒಡನಾಟ, ಭಕ್ತಿ, ಸಾಮಾಜಿಕ ಸಾಮರಸ್ಯವನ್ನು ಬೆಸೆಯುವ ಒಂದು ಸಾಂಸ್ಕೃತಿಕ ಆಚರಣೆಯು ಹೌದು. ಶಿವ ಪಾರ್ವತಿಯ ಆರಾಧನೆಯಿಂದ ಸಮೃದ್ಧಿ, ಸಂತಾನ, ಆಯಸ್ಸು ಶಾಂತಿ ದೊರೆಯುತ್ತದೆ ಎಂಬ ನಂಬಿಕೆಯಿದೆ. ಜಾನಪದ ಕಥೆಯ ಪ್ರಕಾರ ಭೀಮನು ಯಮನನ್ನು ಎದುರಿಸಿ ಈ ದಿನ ವ್ರತ ಮಾಡುವವರಿಗೆ ಆರೋಗ್ಯ, ದೀರ್ಘಾಯುಷ್ಯ ಅಕಾಲಿಕ ಮರಣದಿಂದ ರಕ್ಷಣೆ ದೊರೆಯುವ ವರವನ್ನು ಪಡೆದ ಎಂಬ ನಂಬಿಕೆಯು ಇದೆ. ಈ ಭೀಮನ ಅಮವಾಸ್ಯೆಯಂದು ಎಲ್ಲರೂ ಶಿವಪಾರ್ವತಿಯರ ಆರಾಧನೆ ಮಾಡಿ ಆರೋಗ್ಯ, ಸಂತೋಷ, ಸಮೃದ್ಧಿಯನ್ನು ಪಡೆಯೋಣ.

-ಹರೀಶ್ ಸರಳಾಯ, ಮಡಿಕೇರಿ

ಮೊ.೯೭೩೧೮೧೦೨೫೦