ವೀರಾಜಪೇಟೆ, ಆ. ೧೧: ವೀರಾಜಪೇಟೆಯ ತೆಲುಗುಶೆಟ್ಟರ ಬೀದಿಯಲ್ಲಿರುವ ಶ್ರೀ ದಕ್ಷಿಣ ಮಾರಿಯಮ್ಮ ಹಾಗೂ ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಆಷಾಢ/ಆಟಿ ಮಾಸದ ನಾಲ್ಕನೇ ಶುಕ್ರವಾರದ ಪ್ರಯುಕ್ತ ವಿಶೇಷ ಪೂಜಾ ಮಹೋತ್ಸವ ಹಾಗೂ ಭಕ್ತಿಪೂರ್ವಕ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಶುಕ್ರವಾರದ ಶುಭ ದಿನದಂದು ಮುಂಜಾನೆಯಿAದಲೇ ಶ್ರೀ ಮಾರಿಯಮ್ಮ ದೇವಿಗೆ ವಿಶೇಷ ಅಭಿಷೇಕ, ಅಲಂಕಾರ ಪೂಜೆ ಹಾಗೂ ಕುಂಕುಮಾರ್ಚನೆ ನೆರವೇರಿಸಲಾಯಿತು. ಆಷಾಢ/ಆಟಿ ಮಾಸದ ಅತ್ಯಂತ ಪುಣ್ಯಕರ ಹಾಗೂ ಶ್ರೇಷ್ಠ ಸೇವೆಯೆಂದು ಪರಿಗಣಿಸಲಾದ ದೇವಿಗೆ ರಾಗಿ ಗಂಜಿ (ಕೂಳು) ಸೇವೆಯನ್ನು ಈ ಸಂದರ್ಭದಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಅರ್ಪಿಸಲಾಯಿತು.
ಮಧ್ಯಾಹ್ನ ದೇವಿಗೆ ಮಹಾಮಂಗಳಾರತಿ ನೆರವೇರಿಸಿ, ನೆರೆದಿದ್ದ ನೂರಾರು ಭಕ್ತಾದಿಗಳಿಗೆ ತೀರ್ಥ-ಪ್ರಸಾದ ನೀಡಲಾಯಿತು. ತದನಂತರ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು.
ವೀರಾಜಪೇಟೆ ಹಾಗೂ ಸುತ್ತಮುತ್ತಲಿನ ನೂರಾರು ಭಕ್ತಾದಿಗಳು ಆಗಮಿಸಿ, ದೇವಿಯ ದರ್ಶನ ಪಡೆದು ತೀರ್ಥ-ಪ್ರಸಾದ ಸ್ವೀಕರಿಸಿದರು. ಈ ಸಮಾರಂಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅರ್ಚಕ ವೃಂದದವರು, ಭಕ್ತರು ಇದ್ದರು.