ಸೋಮವಾರಪೇಟೆ, ಆ.೧೦ : ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ತೆರಳುತ್ತಿದ್ದ ದಾವಣಗೆರೆ ಮೂಲದ ಪ್ರವಾಸಿಗರಿದ್ದ ಮಿನಿ ಬಸ್ ಕುಮಾರಳ್ಳಿ ಬಾಚಳ್ಳಿ ರಸ್ತೆಯಲ್ಲಿ ಪಲ್ಟಿಯಾಗಿ ೨೯ ಮಂದಿ ಪ್ರವಾಸಿಗರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.
ನಾಲ್ವರು ಮಕ್ಕಳೂ ಸೇರಿದಂತೆ ಚಾಲಕ, ನಿರ್ವಾಹಕ ಸಹಿತ ೨೩ ಮಂದಿ ಒಂದೇ ಕುಟುಂಬಕ್ಕೆ ಸೇರಿದ ಪ್ರವಾಸಿಗರು ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ತೆರಳುತ್ತಿದ್ದ ಸಂದರ್ಭ ಬಾಚಳ್ಳಿ ಗ್ರಾಮದ ತಿರುವು ರಸ್ತೆಯಲ್ಲಿ ದುರ್ಘಟನೆ ಸಂಭವಿಸಿದ್ದು, ಗಾಯಾಳುಗಳನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕು, ಪಾಂಡವಮಟ್ಟಿ ಗ್ರಾಮ ನಿವಾಸಿಗಳಾದ ಕಿರಣ್, ಯಶಶ್, ರಾಕೇಶ್, ಗುರುಮೂರ್ತಿ, ಶೃತಿ, ಪುಷ್ಪಲತಾ, ನಾಗರತ್ನ, ಸಹನ, ಮೀನಾಕ್ಷಿ, ಬಸಮ್ಮ, ಸಿದ್ದಬಸಪ್ಪ, ಪುಣ್ಯ, ರಶ್ಮಿ, ಶರಣ್ಯ, ಬಸವರಾಜು, ನಾಗರಾಜು, ಲಲಿತಮ್ಮ, ರುದ್ರೇಶ್, ಚಂದ್ರಶೇಖರ್, ಮೇಘನಾ, ವಿನಯ್, ಬಸ್ ನಿರ್ವಾಹಕ ನವೀನ್ ನಾಯಕ್, ಚಾಲಕ ಶಫಿ ಸೇರಿದಂತೆ ಇತರರು ನಿನ್ನೆ ದಿನ ಪ್ರವಾಸಕ್ಕೆಂದು ಮಿನಿ ಬಸ್ನಲ್ಲಿ ಆಗಮಿಸಿದ್ದು, ಸಕಲೇಶಪುರದ ರೆಸಾರ್ಟ್ನಲ್ಲಿ ರಾತ್ರಿ ಕಳೆದು, ಇಂದು ತಾಲೂಕಿನ ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ಆಗಮಿಸಿದ್ದಾರೆ.
ಮಧ್ಯಾಹ್ನ ೧ ಗಂಟೆ ಸುಮಾರಿಗೆ ಮಲ್ಲಳ್ಳಿ ಜಲಪಾತಕ್ಕೆ ತೆರಳುತ್ತಿದ್ದ ಚನ್ನಗಿರಿ ತಾಲೂಕಿನ ಶಫಿ ಚಾಲಿಸುತ್ತಿದ್ದ ಮಿನಿ ಬಸ್ ಕುಮಾರಳ್ಳಿ ಬಾಚಳ್ಳಿ ಗ್ರಾಮದ ರಸ್ತೆಯಲ್ಲಿ ಸಾಗುತ್ತಿದ್ದ ಸಂದರ್ಭ ನಿಯಂತ್ರಣ ಕಳೆದುಕೊಂಡಿದ್ದು, ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ರಸ್ತೆಯ ಒಂದು ಬದಿಗೆ ಪಲ್ಪಿಯಾಗಿದೆ. ಬಸ್ನೊಳಗಿದ್ದ ನಾಲ್ವರು ಪುಟ್ಟ ಮಕ್ಕಳೂ ಸೇರಿದಂತೆ ೨೯ ಮಂದಿ ಉರುಳಿಬಿದ್ದಿದ್ದು, ೨೩ ಮಂದಿಗೆ ಗಾಯಗಳಾಗಿವೆ.
ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿದ್ದು, ಬಸ್ನ ಕಿಟಕಿಗಳನ್ನು ಒಡೆದು ರಕ್ತಸಿಕ್ತಗೊಂಡಿದ್ದ ಗಾಯಾಳುಗಳನ್ನು ಹೊರಗೆಳೆದು ತಮ್ಮದೇ ವಾಹನದಲ್ಲಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಇದರಲ್ಲಿ ಚಂದ್ರಶೇಖರ್, ಮೇಘನಾ, ವಿನಯ್ ಅವರುಗಳನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಜಮೀರ್ ಅಹ್ಮದ್ ಹಾಗೂ ಶುಶ್ರೂಷಕರು ತುರ್ತು ಚಿಕಿತ್ಸೆ ಒದಗಿಸಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ೧೬ ಮಂದಿ ಗಾಯಾಳುಗಳನ್ನು ಮಡಿಕೇರಿ ಚಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ೧೧೨ ಆಂಬ್ಯುಲೆನ್ಸ್ ಚಾಲಕ ಅರುಣ್ ಅವರು ಇತರ ಆಂಬ್ಯುಲೆನ್ಸ್ಗಳಿಗೂ ಕರೆ ಮಾಡಿದ್ದು, ಒಟ್ಟು ೫ ವಾಹನಗಳು ಘಟನಾ ಸ್ಥಳಕ್ಕೆ ತೆರಳಿ ನೆರವು ನೀಡಿವೆ. ಇತ್ತ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಶೀಘ್ರವಾಗಿ ಚಿಕಿತ್ಸೆ ನೀಡುವ ಮೂಲಕ ವೈದ್ಯರು ಹಾಗೂ ಶುಶ್ರೂಷಕರ ತಂಡ ಸೇವಾತತ್ಪರತೆ ಮೆರೆದಿದೆ.
ಪ್ರವಾಸಿಗರು ಹೆಚ್ಚಾಗಿ ಆಗಮಿಸುವ ಮಲ್ಲಳ್ಳಿ ಜಲಪಾತದ ರಸ್ತೆಯ ತಿರುವು ಪ್ರದೇಶದಲ್ಲಿ ಅವಶ್ಯಕ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಇದರಿಂದಾಗಿ ಹಲವಷ್ಟು ಅವಘಡಗಳಿಗೆ ಕಾರಣವಾಗುತ್ತಿವೆ. ಸಂಬAಧಿಸಿದ ಇಲಾಖೆ ರಸ್ತೆಯ ಬದಿಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು, ಗಾಯಾಳುಗಳನ್ನು ತಮ್ಮ ಜೀಪ್ನಲ್ಲಿ ಅಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಬೀದಳ್ಳಿ ತಮ್ಮಯ್ಯ ಅವರು ಅಭಿಪ್ರಾಯಿಸಿದ್ದಾರೆ.
ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸ್ ಠಾಣಾಧಿಕಾರಿ ಖತೀಜಾ, ಮುಖ್ಯ ಪೇದೆ ಸವಿತಾ, ಸಿಬ್ಬಂದಿ ಲೋಹಿತ್ ಅವರುಗಳು ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.ತೀವ್ರ ತರದ ಗಾಯಾಳುಗಳನ್ನು ಮಡಿಕೇರಿಗೆ ಸಾಗಿಸಿದ್ದು, ಸಣ್ಣಪುಟ್ಟ ಗಾಯಗಳಾಗಿರುವ ೫ ಮಂದಿಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ.