ಸೋಮವಾರಪೇಟೆ, ಆ. ೧೦: ನಿವೇಶನ ರಹಿತರಿಗೆ ಸರ್ಕಾರಿ ಜಾಗದಲ್ಲಿ ನಿವೇಶನ ನೀಡಬೇಕೆಂದು ಆಗ್ರಹಿಸಿ ೧೯೪ ಕುಟುಂಬಗಳು ತಾಲೂಕಿನ ಕುಂಬೂರು ಗ್ರಾಮದಲ್ಲಿ ನಡೆಸುತ್ತಿರುವ ಆಹೋರಾತ್ರಿ ಧರಣಿ ಶತಕ ಪೂರೈಸಿದ್ದರೂ, ನಿವೇಶನ ರಹಿತರ ಮೊಗದಲ್ಲಿ ಮಂದಹಾಸ ಮೂಡಿಲ್ಲ. ಕಾರ್ಮಿಕ ಕುಟುಂಬಗಳ ಹೋರಾಟ ಇಂದಿಗೆ ೧೦೦ ದಿನ ಪೂರೈಸಿದ್ದು, ನೂರಾರು ಮಂದಿ ನಿವೇಶನ ರಹಿತರು ಮಳೆ-ಗಾಳಿಯನ್ನು ಲೆಕ್ಕಿಸದೇ ಟಾರ್ಪಲ್‌ನ ಆಶ್ರಯದಡಿ ಸತ್ಯಾಗ್ರಹ ಮುಂದುವರೆಸಿದ್ದಾರೆ.

ಕಳೆದ ಮೇ ೨ನೇ ತಾರೀಕಿನಿಂದ ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯ ಬಹುಜನ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಮೊಣ್ಣಪ್ಪ ಅವರ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆಗೆ ಇಳಿದ ನೂರಾರು ನಿವೇಶನ ರಹಿತರು, ತಮಗೆ ಮನೆ ಕಟ್ಟಿಕೊಳ್ಳಲು ಜಾಗ ನೀಡಲೇಬೇಕೆಂದು ಪಟ್ಟು ಹಿಡಿದು ಧರಣಿ ಹಮ್ಮಿಕೊಂಡಿದ್ದರು.

ತಾಲೂಕಿನ ಗರಗಂದೂರು ಹಾಗೂ ಕುಂಬೂರು ಗ್ರಾಮ ವ್ಯಾಪ್ತಿಯ ಸ.ನಂ. ೧೨೫/೧ರಲ್ಲಿ ೨೯ ಎಕರೆ ಜಾಗದ ಪೈಕಿ ೨ ಎಕರೆ ಜಾಗವನ್ನು ಈ ಹಿಂದೆ ನಿವೇಶನ ರಹಿತರಿಗೆಂದು ಗುರುತಿಸಲಾಗಿತ್ತು. ಆದರೆ ಇತ್ತೀಚೆಗೆ ಆ ಜಾಗವೂ ಕಬಳಿಕೆಯಾಗಿದ್ದು, ನಮಗೆ ಸ್ವಂತ ನಿವೇಶನದ ಕನಸು ಮತ್ತೆ ಮುಸುಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಧರಣಿಯನ್ನು ಮುಂದುವರೆಸಿದರು. ಅಂದು ರಾತ್ರಿ ಸ್ಥಳಕ್ಕೆ ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್‌ಕುಮಾರ್, ವಲಯ ಅರಣ್ಯಾಧಿಕಾರಿ ಶೈಲೇಂದ್ರಕುಮಾರ್ ಅವರುಗಳು ತೆರಳಿ ಪ್ರತಿಭಟನಾಕಾರರ ಮನವಿ ಆಲಿಸಿ ಸೂಕ್ತ ಕ್ರಮದ ಭರವಸೆ ನೀಡಿದ್ದರು. ಇದಕ್ಕೆ ಒಪ್ಪದ ನಿವೇಶನ ರಹಿತರು ಧರಣಿಯನ್ನು ಆಹೋರಾತ್ರಿಗೆ ಮುಂದುವರೆಸಿದರು.

ಒಂದೆರಡು ದಿನಗಳಲ್ಲಿ ಧರಣಿ ಅಂತ್ಯಗೊಳ್ಳಬಹುದು ಎಂದು ಭಾವಿಸಿದ್ದ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳ ಭಾವನೆ ಹುಸಿಯಾಗಿದ್ದು, ಇದೀಗ ಧರಣಿ ೧೦೦ ದಿನಗಳನ್ನು ಪೂರೈಸಿದೆ. ಈ ಮಧ್ಯೆ ತಹಶೀಲ್ದಾರ್ ಸೇರಿದಂತೆ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸುವ ಯತ್ನ ನಡೆಸಿದ್ದರೂ ಫಲಪ್ರದವಾಗಿಲ್ಲ. ನಿವೇಶನ ಲಭಿಸುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದ ಪರಿಣಾಮ ನಿವೇಶನ ರಹಿತರ ಹೋರಾಟ ೧೦೦ ದಿನ ಪೂರೈಸಿದೆ.

ಕುಂಬೂರಿನ ಸ.ನಂ. ೧೨೫/೧ರಲ್ಲಿ ೨೯ ಎಕರೆ ಜಾಗವಿದ್ದು, ೨೦೧೧ರಲ್ಲಿ ನವಗ್ರಾಮ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಆದೇಶದ ಮೇರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಹೆಸರಿಗೆ ೨ ಎಕರೆ ಜಾಗವನ್ನು ಕಾಯ್ದಿರಿಸಲಾಗಿದೆ. ಈ ಜಾಗವನ್ನು ನಿವೇಶನ ರಹಿತರಿಗೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಇದರೊಂದಿಗೆ ಪಕ್ಕದಲ್ಲಿ ೨೨/೧ರಲ್ಲಿ ೧೦ ಏಕರೆ ಜಾಗವಿದ್ದು, ಗೋಮಾಳ ಎಂದು ನಮೂದಾಗಿದೆ. ಅಕ್ರಮ ಸಕ್ರಮ ಅಡಿಯಲ್ಲಿ ಇದೇ ಜಾಗದಲ್ಲಿ ಖಾಸಗಿ ವ್ಯಕ್ತಿಯೋರ್ವರಿಗೆ ೧.೯೦ ಎಕರೆ ಮಂಜೂರು ಮಾಡಲಾಗಿದೆ. ಆದರೆ ನಿವೇಶನ ರಹಿತರಿಗೆ ಕಾಯ್ದಿರಿಸಿದ ೧೨೫/೧ರ ಜಾಗವನ್ನು ಈವರೆಗೆ ನೀಡಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ನವಗ್ರಾಮಕ್ಕೆಂದು ಗುರುತಿಸಿದ ಸ.ನಂ. ಜಾಗದಲ್ಲಿ ಹದ್ದುಬಸ್ತು ಸರ್ವೆ ಮಾಡಬೇಕು. ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಈ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕು. ಕೆಳಮಟ್ಟದ ಅಧಿಕಾರಿಗಳು ಜನರೊಂದಿಗೆ ದರ್ಪ ತೋರುವುದನ್ನು ನಿಲ್ಲಿಸಬೇಕು. ಹೋರಾಟವನ್ನು ದಾರಿ ತಪ್ಪಿಸಲು, ಹತ್ತಿಕ್ಕಲು ಪ್ರಯತ್ನಿಸಬಾರದು. ನಿವೇಶನ ರಹಿತರಿಗೆ ನಿವೇಶನ ನೀಡಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರೆಯಲಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ನಿವೇಶನ ಒದಗಿಸುವ ಭರವಸೆ ನೀಡಿದ್ದಾರೆ. ಅದು ಈಡೇರುವವರೆಗೆ ಧರಣಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಬಹುಜನ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಮೊಣ್ಣಪ್ಪ ತಿಳಿಸಿದ್ದಾರೆ.

೨೦೧೧ರಲ್ಲಿ ಅಂದಿನ ಶಾಸಕ ಅಪ್ಪಚ್ಚು ರಂಜನ್ ಅವಧಿಯಲ್ಲಿ ನವಗ್ರಾಮಕ್ಕೆ ಜಾಗ ಗುರುತಿಸಲಾಗಿದೆ. ಆದರೆ ಗುರುತಿಸಿರುವ ಜಾಗ ಯಾವುದು ಎಂಬುದು ಅಧಿಕಾರಿಗಳಿಗೆ ಗೊತ್ತಿಲ್ಲ. ಆರ್‌ಟಿಸಿಯಲ್ಲಿ ಈ ಬಗ್ಗೆ ದಾಖಲಾಗಿದ್ದರೂ ಸಂಬAಧಿಸಿದ ದಾಖಲೆಗಳನ್ನು ಅಧಿಕಾರಿಗಳು ಇಟ್ಟುಕೊಂಡಿಲ್ಲ ಎಂದು ಆರೋಪಿಸಿರುವ ಅವರು,ನಿವೇಶನ ರಹಿತ ಕೂಲಿ ಕಾರ್ಮಿಕ ಕುಟುಂಬಕ್ಕೆ ಸೂರು ಒದಗಿಸಲು ಸರ್ಕಾರ ಮುಂದಾಗಬೇಕೆAದು ಒತ್ತಾಯಿಸಿದ್ದಾರೆ.

ಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ಸುಂಟಿಕೊಪ್ಪ, ಮಾದಾಪುರ, ಕೆದಕಲ್, ನಾಕೂರು ಶಿರಂಗಾಲ, ಕಂಬಿಬಾಣೆ, ಕುಂಬೂರು, ಜಂಬೂರು, ಗರಗಂದೂರು, ಹರದೂರು, ಬೆಟ್ಟಗೇರಿ, ಕಡಗದಾಳು, ಬೋಯಿಕೇರಿ ಭಾಗದ ೧೯೪ ಕುಟುಂಬಗಳ ೪೦೦ಕ್ಕೂ ಅಧಿಕ ಮಂದಿ ಕುಂಬೂರಿನಲ್ಲಿ ಧರಣಿ ನಿರತರಾಗಿದ್ದಾರೆ.

ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ಕುಟುಂಬಗಳೊAದಿಗೆ ಇತರೆ ಸಮುದಾಯಕ್ಕೆ ಸೇರಿದ ೪೦ಕ್ಕೂ ಅಧಿಕ ಕುಟುಂಬಗಳು ಧರಣಿಯಲ್ಲಿ ತೊಡಗಿಸಿಕೊಂಡಿದ್ದಾರೆ. ೧೧ ವಿದ್ಯಾರ್ಥಿಗಳು ಧರಣಿ ನಿರತ ಸ್ಥಳದಿಂದಲೇ ಕಾಲೇಜಿಗೆ ತೆರಳುತ್ತಿದ್ದು, ೨೩ ಮಂದಿ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ೭ ಮಕ್ಕಳು ಅಂಗನವಾಡಿಗೆ ಒಮ್ಮೊಮ್ಮೆ ತೆರಳುತ್ತಿದ್ದಾರೆ.

ಸ್ಥಳದಲ್ಲೇ ಊಟ ತಿಂಡಿ ನಿದ್ರೆ ಮಾಡುತ್ತಿರುವ ಪ್ರತಿಭಟನಾಕಾರರು, ಟಾರ್ಪಲ್ ಹೊದಿಕೆಯೊಳಗೆ ಆಶ್ರಯ ಪಡೆದಿದ್ದಾರೆ.ಸರ್ವೆ ಮಾಡಿದ ಅಧಿಕಾರಿಗಳು ವಾರದೊಳಗೆ ವರದಿ ನೀಡುವುದಾಗಿ ಭರವಸೆ ನೀಡಿ ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರೂ ಈವರೆಗೆ ನಿವೇಶನ ಲಭಿಸಿಲ್ಲ ಎಂದು ಬಹುಜನ ಕಾರ್ಮಿಕ ಸಂಘಟನೆಯ ಸುಂಟಿಕೊಪ್ಪ ಹೋಬಳಿ ಕಾರ್ಯದರ್ಶಿ ಸುದೀಪ್ ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ನಿವೇಶನ ರಹಿತರೊಂದಿಗೆ ಬಹುಜನ ಕಾರ್ಮಿಕರ ಸಂಘಟನೆಯ ಜಿಲ್ಲಾ ಅಧ್ಯಕ್ಷ ಮೊಣ್ಣಪ್ಪ, ಕಾರ್ಯದರ್ಶಿ ಶಿವಪ್ಪ, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಸೋಮಣ್ಣ, ಉಪಾಧ್ಯಕ್ಷ ಆನಂದ್, ಕಾರ್ಯದರ್ಶಿ ಸುದೀಪ್, ಸಹ ಕಾರ್ಯದರ್ಶಿ ದಿವ್ಯಅವರುಗಳು ಭಾಗಿಯಾಗಿದ್ದಾರೆ. ಒಟ್ಟಾರೆ ನಿವೇಶನ ರಹಿತರ ಹೋರಾಟ ೧೦೦ ದಿನಗಳನ್ನು ಪೂರೈಸಿ, ೧೦೧ನೇ ದಿನಕ್ಕೆ ಕಾಲಿಟ್ಟಿದೆ. ಆರಂಭದಲ್ಲಿದ್ದ ನಿರೀಕ್ಷೆ ಇನ್ನೂ ಜೀವಂತವಾಗಿದೆ. ಇನ್ನೆಷ್ಟು ದಿನಗಳ ಧರಣಿ? ಎಂಬುದು ಶಾಸಕರು ಹಾಗೂ ಅಧಿಕಾರಿ ವರ್ಗದ ಸ್ಪಂದನದ ಮೇಲೆನಿಂತಿದೆ. - ವಿಜಯ್ ಹಾನಗಲ್