ನಾಪೋಕ್ಲು, ಆ. ೧೦: ಅನಾರೋಗ್ಯದಿಂದ ಬಳಲುತ್ತಿದ್ದ ಕಾಡಾನೆಯೊಂದು ತೋಡಿನಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ಬೊಮ್ಮಂಜಿಕೇರಿ ವ್ಯಾಪ್ತಿಯಲ್ಲಿ ನಡೆದಿದೆ.

ಕಳೆದ ಎರಡು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾಡಾನೆ ಸೋಮವಾರ ಬೆಳಿಗ್ಗೆ ಸ್ಥಳೀಯರು ನೋಡುತ್ತಿದ್ದಂತೆಯೇ ತೋಡಿಗೆ ಇಳಿದು ಕುಸಿದು ಬಿದ್ದು ಮೃತಪಟ್ಟಿದೆ. ಆನೆ ಕುಸಿದು ಬೀಳುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಕಳೆದ ಕೆಲವು ದಿನಗಳಿಂದ ಕೈಕಾಡು, ಬೇತು ಹಾಗೂ ಕೊಳಕೇರಿ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕಾಫಿ ಬೆಳೆಗಾರರ ತೋಟಗಳಲ್ಲಿನ ಬಾಳೆ, ಅಡಿಕೆ ಸೇರಿದಂತೆ ವಿವಿಧ ಬೆಳೆಗಳನ್ನು ತಿಂದು, ತುಳಿದು ಹಾನಿಗೊಳಿಸುತ್ತಿದ್ದವು.

ಭಾನುವಾರ ಕೊಳಕೇರಿ ಗ್ರಾಮದ ಬೊಮ್ಮಂಜಿಕೆರಿ ವ್ಯಾಪ್ತಿಯಲ್ಲಿ ಗಂಡು ಕಾಡಾನೆಯೊಂದು ನಿಶಕ್ತಿಯಿಂದ ಕುಸಿದು ಬಿದ್ದು, ಮತ್ತೆ ಎದ್ದು ನಡೆಯಲು ಪ್ರಯತ್ನಿಸುತ್ತಿದ್ದ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿ ಆನೆಯನ್ನು ಕಾಡಿನತ್ತ ಓಡಿಸಲು ಪ್ರಯತ್ನಿಸಿದರೂ ಅದು ಫಲಕಾರಿಯಾಗಿರಲಿಲ್ಲ.

ಭಾನುವಾರ ರಾತ್ರಿ ಅನಾರೋಗ್ಯದಿಂದ ಬಳಲುತ್ತಿದ್ದ ಆನೆ ಕೊಳಕೇರಿ ಗ್ರಾಮದ ಕಾಫಿ ಬೆಳೆಗಾರ ಬಿದ್ದಾಟಂಡ ರಮೇಶ್ ಚಂಗಪ್ಪ ಅವರ ಮನೆಯ ಅಂಗಳಕ್ಕೆ ನುಗ್ಗಿ, ಅಲ್ಲಿ ನಿಲ್ಲಿಸಿದ್ದ ಬೊಲೆರೋ ಹಾಗೂ ಮಾರುತಿ ವ್ಯಾನ್‌ಗಳಿಗೆ ತಿವಿದು ಮುಂಭಾಗದ ಗಾಜು ಹಾಗೂ ವಾಹನದ ಬಾಡಿಗೆ ಹಾನಿ ಮಾಡಿದೆ. ಬಳಿಕ ರಮೇಶ್

೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಅವರ ಸಹೋದರ ತಮ್ಮಯ್ಯ ಅವರ ಮನೆಯ ಗೇಟ್‌ನ್ನು ಮುರಿದು ಹಾಕಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಭಾಗಮಂಡಲ ಆರ್‌ಎಫ್‌ಒ ಶಂಕರ್ ಮಾತನಾಡಿ, ನೀರು ಕುಡಿಯಲು ತೋಡಿಗೆ ಇಳಿದ ಸಂದರ್ಭ ಕಾಡಾನೆ ಮೃತಪಟ್ಟಿರುವುದು ಕಂಡುಬAದಿದೆ. ರಸ್ತೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ಆನೆ ಬಿದ್ದಿರುವುದರಿಂದ ಯಂತ್ರೋಪಕರಣಗಳ ನೆರವಿನಿಂದ ಮೃತದೇಹವನ್ನು ಸ್ಥಳಾಂತರಿಸಬೇಕಾಗಿದೆ. ಸೋಮವಾರ ಸಾಧ್ಯವಾಗದ ಹಿನ್ನೆಲೆಯಲ್ಲಿ ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಅಂತ್ಯಕ್ರಿಯೆ ಮಾಡಲಾಗುವುದು. ಮರಣಕ್ಕೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ಬಳಿಕ ತಿಳಿಯಲಿದೆ ಎಂದು ಹೇಳಿದರು.

ಸ್ಥಳದಲ್ಲಿ ಎಸಿಎಫ್ ಸೆಂದಿಲ್ ಕುಮಾರ್, ಡಿವೈಆರ್‌ಎಫ್ ಕಾಳೇಗೌಡ, ಆನೆ ಕಾರ್ಯಪಡೆ (ಆರ್‌ಆರ್‌ಟಿ) ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.

ಮನೆ ಸಮೀಪವೇ ಕಾಡಾನೆಗಳ ಸಂಚಾರ

ಕಾಫಿ ಬೆಳೆಗಾರ ಬಿದ್ದಾಟಂಡ ರಮೇಶ್ ಚಂಗಪ್ಪ ಮಾತನಾಡಿ, ಸೋಮವಾರ ಬೆಳಗಿನ ಜಾವ ಸುಮಾರು ೨.೩೦ರ ವೇಳೆಗೆ ಸಮೀಪದ ಲೈನ್‌ಮನೆ ಬಳಿ ಕಾಡಾನೆಗಳು ಸಂಚರಿಸುತ್ತಿರುವುದನ್ನು ಕಾರ್ಮಿಕರು ಗಮನಿಸಿ ಎಚ್ಚರಿಕೆ ನೀಡಿದ್ದರು. ಕೆಲವೇ ಸಮಯದಲ್ಲಿ ಮನೆ ಸಮೀಪ ಬಂದ ಕಾಡಾನೆಗಳು ಮನೆಯ ಮುಂದೆ ನಿಲ್ಲಿಸಿದ್ದ ಎರಡು ವಾಹನಗಳಿಗೆ ಹಾನಿ ಮಾಡಿವೆ. ಬಳಿಕ ಸುಮಾರು ೧೦೦ ಮೀಟರ್ ದೂರದಲ್ಲಿರುವ ಸಹೋದರನ ಮನೆ ಬಳಿ ತೆರಳಿ ಗೇಟ್‌ಗೂ ಹಾನಿ ಮಾಡಿವೆ ಎಂದು ತಿಳಿಸಿದರು.