ವೀರಾಜಪೇಟೆ, ಆ. ೯: ಶ್ರೀ ಕ್ಷೇತ್ರ ಮಲೆತಿರಿಕೆ ಬೆಟ್ಟದ ಶ್ರೀ ಶನೇಶ್ವರ ದೇವಾಲಯದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರಲಾಗುತ್ತಿರುವ ವಾರ್ಷಿಕ ಶ್ರಾವಣ ಮಹೋತ್ಸವವು ಈ ವರ್ಷವೂ ಅತ್ಯಂತ ಶ್ರದ್ಧಾ-ಭಕ್ತಿಗಳೊಂದಿಗೆ ಜರುಗಲಿದೆ. ಆಗಸ್ಟ್ ೧೫ ರಿಂದ ಸೆಪ್ಟೆಂಬರ್ ೫ರವರೆಗೆ ಬರುವ ೪ ಪವಿತ್ರ ಶ್ರಾವಣ ಶನಿವಾರಗಳಂದು ಸಕಲ ಧಾರ್ಮಿಕ ಪೂಜಾ ವಿಧಿ-ವಿಧಾನಗಳೊಂದಿಗೆ ಮಹೋತ್ಸವವನ್ನು ಆಚರಿಸಲಾಗುವುದು.

ಶ್ರಾವಣ ಮಾಸದ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಅಂಗವಾಗಿ ಆಗಸ್ಟ್ ೧೪ ಶುಕ್ರವಾರದಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ ನಡೆಸಿ ಪೂಜಾ ಕೈಂಕರ್ಯಗಳಿಗೆ ಚಾಲನೆ ನೀಡಲಾಗುತ್ತದೆ. ರಾತ್ರಿ ೭ ಗಂಟೆಗೆ ದುರ್ಗಾಪೂಜೆ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ.

ಪ್ರತಿ ಶ್ರಾವಣ ಶನಿವಾರ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಆ.೧೫ ಶನಿವಾರ ಬೆಳಿಗ್ಗೆ ೫ ಗಂಟೆಗೆ ಶ್ರೀ ಶನೀಶ್ವರ ದೇವರಿಗೆ ಅಭಿಷೇಕ, ೬ ಗಂಟೆಗೆ ಅಲಂಕಾರ ಪೂಜೆ, ೮ ಗಂಟೆಗೆ ನವಗ್ರಹ ಪೂಜೆ, ೧೧ ಗಂಟೆಗೆ ಶ್ರೀ ದೇವರ ದರ್ಶನ, ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ಪ್ರಸಾದ ವಿನಿಯೋಗ ಹಾಗೂ ಮಹಾ ಅನ್ನಸಂತರ್ಪಣೆ ನಡೆದು, ರಾತ್ರಿ ೭ ಗಂಟೆಗೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಆಗಸ್ಟ್ ೨೨ ರಂದು ಎರಡನೇ ಶ್ರಾವಣ ಶನಿವಾರ ಬೆಳಿಗ್ಗೆ ೮ ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ನಡೆಯಲಿದೆ. ಬಳಿಕ ವಿವಿಧ ಪೂಜೆಗಳು ಅನ್ನಸಂತರ್ಪಣೆ ನಡೆಯಲಿದೆ. ಆಗಸ್ಟ್ ೨೯ರಂದು ಮೂರನೇ ಶ್ರಾವಣ ಶನಿವಾರದ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ಸೆಪ್ಟೆಂಬರ್ ೪ ಶುಕ್ರವಾರ ರಾತ್ರಿ ೭ ಗಂಟೆಗೆ ದೀಪೋತ್ಸವ, ದುರ್ಗಾದೇವಿ ಪೂಜೆ ಹಾಗೂ ಅನ್ನಸಂತರ್ಪಣೆ, ಸೆಪ್ಟೆಂಬರ್ ೫ ಶನಿವಾರ ನಾಲ್ಕನೇ ಶ್ರಾವಣ ಶನಿವಾರದ ವಿವಿಧ ಪೂಜಾ ಕೈಂಕರ್ಯಗಳು ನಡೆದು, ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ೬ ಗಂಟೆಗೆ ಶ್ರೀ ದೇವರ ಉತ್ಸವ ಮೂರ್ತಿಯೊಂದಿಗೆ ವೈಭವದ ಪೇಟೆ ಮೆರವಣಿಗೆ ಹಾಗೂ ರಾತ್ರಿ ೯ ಗಂಟೆಗೆ ದೇವಾಲಯದಲ್ಲಿ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆದು ವಾರ್ಷಿಕ ಶ್ರಾವಣ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ.

ಶ್ರಾವಣ ಮಾಸದ ಈ ಶುಭ ಸಂದರ್ಭದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ದೇವರ ದರ್ಶನ ಪಡೆದು ತೀರ್ಥ-ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಶನೇಶ್ವರ ಭಕ್ತ ಮಂಡಳಿಯ ಯುವರಾಜ್ ಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ೯೬೮೬೪೦೩೧೦೧ ಸಂಪರ್ಕಿಸಬಹುದು.