ಗೋಣಿಕೊಪ್ಪಲು, ಆ. ೯ : ಗೋಣಿಕೊಪ್ಪ ಮಾರುಕಟ್ಟೆಯಲ್ಲಿ ಪೊಲೀಸರು ಸಂಶಯಾಸ್ಪದ ಅಸ್ಸಾಂ ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಿದರು.
ವಾರದ ಸಂತೆ ದಿನದಂದು ಕೆಲ ಅಸ್ಸಾಂ ಕಾರ್ಮಿಕರು ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಎಚ್ಚೆತ್ತ ಗೋಣಿಕೊಪ್ಪ ಪೊಲೀಸರು ಠಾಣಾಧಿಕಾರಿ ಕಾಳೇಗೌಡ ಮುಂದಾಳತ್ವದಲ್ಲಿ ಮಾರುಕಟ್ಟೆ ಆವರಣದಲ್ಲಿದ್ದ ಅಸ್ಸಾಂ ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಿದರು. ಅವರು ತಂದಿದ್ದ ಬ್ಯಾಗ್‌ಗಳನ್ನು ಪರಿಶೀಲನೆ ನಡೆಸಿದರು.
ಮಧ್ಯಾಹ್ನದ ವೇಳೆ ಮಾರುಕಟ್ಟೆಗೆ ಆಗಮಿಸಿದ್ದ ೩೦ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಏಕಕಾಲದಲ್ಲಿ ಮಾರುಕಟ್ಟೆ ಆವರಣದ ಪ್ರಮುಖ ನಾಲ್ಕು ರಸ್ತೆಯಲ್ಲಿ ಬಿರುಸಿನ ತಪಾಸಣೆ ನಡೆಸಿದರು.
ಇತ್ತೀಚೆಗೆ ಗೋಣಿಕೊಪ್ಪ ಮಾರುಕಟ್ಟೆಗೆ ಸಂತೆದಿನದAದು ಆಗಮಿಸುವ ಕೆಲ ಅಸ್ಸಾಂ ಕಾರ್ಮಿಕರು ಅಕ್ರಮವಾಗಿ ಸಣ್ಣ ಸಣ್ಣ ಪ್ಲಾಸ್ಟಿಕ್ ಪ್ಯಾಕೆಟ್‌ನಲ್ಲಿ ಗಾಂಚಾವನ್ನು ತುಂಬಿ ಯಾರಿಗೂ ಸಂಶಯ ಬಾರದ ರೀತಿಯಲ್ಲಿ ವ್ಯಾಪಾರ ಕುದುರಿಸಿ ತೆರಳುತ್ತಿದ್ದರು. ಇದನ್ನು ಪತ್ತೆಹಚ್ಚುವಲ್ಲಿ ಗೋಣಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದರು. ಪ್ರಮುಖ ಐದು ಅಸ್ಸಾಂ ಕಾರ್ಮಿಕರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು.
ಇದೀಗ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮಾರುಕಟ್ಟೆಗೆ ಆಗಮಿಸಿ ಅಸ್ಸಾಂ ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಿದರು. ಪೊಲೀಸರ ಕಾರ್ಯಕ್ಕೆ ನಾಗರಿಕರಿಂದ ಪ್ರಶಂಸೆ ವ್ಯಕ್ತವಾಯಿತು.
ಪಾದಚಾರಿಗಳಿಗೆ ಅನುಕೂಲ
ಸಂತೆ ದಿನದಂದು ನೂರಾರು ವ್ಯಾಪಾರಸ್ಥರು ಗೋಣಿಕೊಪ್ಪಕ್ಕೆ ಆಗಮಿಸಿ, ಮಾರುಕಟ್ಟೆ ಆವರಣದ ರಸ್ತೆಯನ್ನು ಅತಿಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಗೋಣಿಕೊಪ್ಪ ಪೊಲೀಸರು ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿದರು.
ರಸ್ತೆಯಲ್ಲಿದ್ದ ವಸ್ತುಗಳನ್ನು ಒಂದು ಬದಿಗೆ ಸರಿಸಿ ವ್ಯಾಪಾರಕ್ಕೆ ಅನುಕೂಲ ಕಲ್ಪಿಸಿದರು.
ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಮಾರುಕಟ್ಟೆ ಆವರಣದಲ್ಲಿ ನಾಗರಿಕರು ಓಡಾಡುವ ಜಾಗಗಳಲ್ಲಿ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡುವ ಮೂಲಕ ಸ್ಥಳವನ್ನು ಅತಿಕ್ರಮಿಸಿದ್ದ ವಾಹನ ಮಾಲೀಕರಿಗೂ ಎಚ್ಚರಿಕೆ ನೀಡಿ ವಾಹನ ತೆರವುಗೊಳಿಸಿದರು. ನೋ ಪಾರ್ಕಿಂಗ್ ನಾಮಫಲಕ ಅಳವಡಿಸಿದ್ದರೂ ಮಾರುಕಟ್ಟೆ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಿರುವುದನ್ನು ಗಮನಿಸಿದ ಠಾಣಾಧಿಕಾರಿಗಳು ಅಲ್ಲಿದ್ದ ವಾಹನ ತೆರವುಗೊಳಿಸಿ, ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಿದರು.
ಖಾಲಿ..ಖಾಲಿ..
ಸದಾ ಅಸ್ಸಾಂ ಕಾರ್ಮಿಕರಿಂದ ತುಂಬಿ ತುಳುಕುತ್ತಿದ್ದ ಗೋಣಿಕೊಪ್ಪ ಮಾರುಕಟ್ಟೆಯಲ್ಲಿ ಗೋಣಿಕೊಪ್ಪ ಪೊಲೀಸರು ದಿಢೀರನೆ ಆಗಮಿಸಿ, ಅಸ್ಸಾಂ ಕಾರ್ಮಿಕರನ್ನು ತಪಾಸಣೆ ಮಾಡುತ್ತಿದ್ದಂತೆಯೇ ವಿಷಯ ತಿಳಿದ ಅಸ್ಸಾಂ ಕಾರ್ಮಿಕರು ಕ್ಷಣಾರ್ಧದಲ್ಲಿ ಮಾರುಕಟ್ಟೆಯಿಂದ ಜಾಗ ಖಾಲಿ ಮಾಡಿದ್ದರು. ಇದರಿಂದ ಕೆಲವೇ ಸಮಯದಲ್ಲಿ ಮಾರುಕಟ್ಟೆ ಖಾಲಿ ಖಾಲಿಯಾಗಿತ್ತು
- ಹೆಚ್.ಕೆ. ಜಗದೀಶ್