ಐಗೂರು, ಆ.೯: ಶಿಕ್ಷಣದ ಗುಣಮಟ್ಟ ಮತ್ತು ಸಮುದಾಯದ ಸಹಕಾರದಿಂದ ಜಿಲ್ಲೆಯ ಅತ್ಯುತ್ತಮ ಸಮುದಾಯ ಶಾಲೆ ಎಂಬ ಪ್ರಶಸ್ತಿಗೆ ಭಾಜನವಾಗಿರುವ ಕಾಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದು ಅಭಿವೃದ್ಧಿಯ ನಿರೀಕ್ಷೆಯಲ್ಲಿದೆ.
ಐಗೂರಿನಲ್ಲಿ ನಡೆದ ಒಂಬತ್ತನೇ ಕಸಾಪ ಸಮ್ಮೇಳನದ ಅಂಗವಾಗಿ ಶಾಲೆಗೆ ಸುಣ್ಣ, ಬಣ್ಣ ಬಳಿದು ಅಲಂಕಾರಗೊಳಿಸಲಾಗಿತ್ತಾದರೂ ಹಲವು ಸಮಸ್ಯೆಗಳು ಇನ್ನೂ ಬಗೆಹರಿಯಬೇಕಾಗಿದೆ. ಕನ್ನಡ ಮಾಧ್ಯಮದಲ್ಲಿ ೭೯ ಹಾಗೂ ಆಂಗ್ಲ ಮಾಧ್ಯಮದಲ್ಲಿ ೩೧ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೧೧೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸರಕಾರದಿಂದ ೫ನೇ ತರಗತಿವರೆಗೆ ಆಂಗ್ಲ ಮಾಧ್ಯಮದ ಶಿಕ್ಷಣಕ್ಕೆ ಅನುಮತಿ ದೊರಕಿದೆ.
ಶಾಲೆಯಲ್ಲಿ ದೈಹಿಕ ಶಿಕ್ಷಣದ ಶಿಕ್ಷಕರು ಸೇರಿ ಇಬ್ಬರು ಶಿಕ್ಷಕರ ಕೊರತೆ ಇದೆ. ಶಾಲೆಯ ಬಹುತೇಕ ಕೊಠಡಿಗಳ ಮೇಲ್ಛಾವಣಿಯ ಮರದ ಕೌಕೋಲುಗಳು ಗೆದ್ದಲು ಹಿಡಿದಿದ್ದು ಹೊಸ ಕೌಕೋಲು ಅಳವಡಿಸಬೇಕಾಗಿದೆ. ಕೆಲವು ಕಡೆ ಮೇಲ್ಭಾಗದ ಗೋಡೆಗಳಲ್ಲಿ ರಂದ್ರಗಳು ಉಂಟಾಗಿ ದುರಸ್ತಿಯಾಗಬೇಕಾಗಿದೆ. ಕಾಡು ದನಗಳ ಹಾವಳಿಯಿಂದ ಶಾಲಾವರಣದಲ್ಲಿನ ಹಸಿರನ್ನು ಉಳಿಸಲು ಸಾಧ್ಯವಾಗುತ್ತಿಲ್ಲ. ಶಾಲೆಯ ಸುತ್ತಲೂ ಕಾಂಪೌAಡ್ ತಡೆಗೋಡೆ ಇದ್ದರೂ ಪೂರ್ಣವಾಗಿ ನಿರ್ಮಾಣ ಆಗಬೇಕಾಗಿದೆ. ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಆದ್ಯತೆ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. -ಸುಕುಮಾರ್