ಗೋಣಿಕೊಪ್ಪಲು, ಆ.೯: ತಿತಿಮತಿ ಸಮೀಪದ ಆನೆಚೌಕೂರು ಗೇಟ್ ಬಳಿ ೨ ಲಾರಿಗಳು ರಸ್ತೆ ಬದಿಯ ಕಂದಕಕ್ಕೆ ಇಳಿದ ಪರಿಣಾಮ ತಡ ರಾತ್ರಿಯಿಂದ ಮುಂಜಾನೆಯವರೆಗೆ ರಾಜ್ಯ ಹೆದ್ದಾರಿ ಬಂದ್ ಆಗಿತ್ತು.
ಮಧ್ಯರಾತ್ರಿಯಿಂದ ಸರತಿ ಸಾಲಿನಲ್ಲಿ ನೂರಾರು ವಾಹನಗಳು ರಸ್ತೆ ಬದಿಯಲ್ಲೇ ನಿಲುಗಡೆಗೊಂಡಿದ್ದವು. ರಾತ್ರಿ ಕಲ್ಲು ತುಂಬಿದ್ದ ಲಾರಿ ತಿತಿಮತಿ ಮಾರ್ಗವಾಗಿ ಕೇರಳಕ್ಕೆ ತೆರಳುತ್ತಿದ್ದ ಸಂದರ್ಭ ಗೋಣಿಕೊಪ್ಪ ಪೊಲೀಸರು ಲಾರಿಯನ್ನು ತಪಾಸಣೆ ನಡೆಸಿ ಹೆಚ್ಚು ತೂಕ ಹೊಂದಿದ್ದ ಲಾರಿಯನ್ನು ಹಿಂತೆರಳಲು ಸೂಚನೆ ನೀಡಿದ್ದರು. ಈ ವೇಳೆ ಲಾರಿಯನ್ನು ತಿರುಗಿಸಲು ಮುಂದಾದ ಸಂದರ್ಭ ಲಾರಿಯ ಹಿಂಬದಿ ಕಂದಕಕ್ಕೆ ಸಿಲುಕಿಕೊಂಡಿದೆ.
ಇದೇ ವೇಳೆ ಮತ್ತೊಂದು ಲಾರಿ ಮುಂದೆ ಸಾಗಲು ಯತ್ನಿಸಿದಾಗ ಲಾರಿ ಕೆಸರಿನಲ್ಲಿ ಸಿಲುಕಿಕೊಂಡಿದ್ದು, ಇದರಿಂದಾಗಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಯಿತು. ಮುಂಜಾನೆ ವೇಳೆ ಎರಡೂ ಲಾರಿಯಲ್ಲಿದ್ದ ಸರಕುಗಳನ್ನು ಇಳಿಸಿ, ಮತ್ತೊಂದು ಲಾರಿಗೆ ತುಂಬಿ ನಂತರ ರಸ್ತೆ ಬದಿಯಲ್ಲಿದ್ದ ಲಾರಿಯನ್ನು ಕಂದಕದಿAದ ಹೊರತರಲಾಯಿತು. ನಂತರ ಸಂಚಾರ ವ್ಯವಸ್ಥೆ ಎಂದಿನAತೆ ಮುಂದುವರಿಯಿತು.
ಅತಿ ದೊಡ್ಡ ಸರಕು ಸಾಗಣೆ ವಾಹನಗಳು ಜಿಲ್ಲೆಗೆ ಬರುವುದನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ನೀಡಿದ್ದರೂ ತಡರಾತ್ರಿ ವೇಳೆ ಮೈಸೂರು - ತಿತಿಮತಿ - ಗೋಣಿಕೊಪ್ಪ ಮಾರ್ಗವಾಗಿ ಕೇರಳ ರಾಜ್ಯಕ್ಕೆ ಇಂತಹ ವಾಹನಗಳು ತೆರಳುತ್ತಿವೆ.
-ಹೆಚ್.ಕೆ. ಜಗದೀಶ್